HEALTH TIPS

ಪಾಕಿಸ್ತಾನದ ರಸ್ತೆಗಳಿಗೆ ಮರುನಾಮಕರಣ: ಇಸ್ಲಾಂಪುರ ಈಗ ಕೃಷ್ಣ ನಗರ!

ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ತಾನ ವಿಭಜನೆಯಾಗಿ ಸುಮಾರು ಎಂಟು ದಶಕಗಳೇ ಕಳೆದಿವೆ. ಈಗ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಲಾಹೋರ್ ತನ್ನ ಐತಿಹಾಸಿಕ ಮತ್ತು ಸಾಂಪ್ರದಾಯಿಕ ರಸ್ತೆಗಳು, ಗಲ್ಲಿಗಳು ಹಾಗೂ ಪ್ರಮುಖ ಚೌಕಗಳಿಗೆ ವಿಭಜನೆ ಪೂರ್ವದಲ್ಲಿದ್ದ ಹಿಂದೂ, ಸಿಖ್, ಜೈನ್ ಮತ್ತು ಬ್ರಿಟಿಷ್ ವಸಾಹತುಶಾಹಿ ಕಾಲದ ಮೂಲ ಹೆಸರನ್ನು ಮರುನಾಮಕರಣ ಮಾಡಲಾಗುತ್ತಿದೆ.

ಈ ಹಿಂದೆ ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಗಾಗಿ ಇಸ್ಲಾಮಿಕ್ ಹಾಗೂ ಪಾಕಿಸ್ತಾನದ ಸ್ಥಳೀಯ ನಾಯಕರ ಹೆಸರಿಡಲಾಗಿದ್ದ ರಸ್ತೆಗಳಿಗೆ ಈಗ ಹಳೆಯ ಹೆಸರುಗಳನ್ನೇ ಮರುಸ್ಥಾಪಿಸಲಾಗುತ್ತಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮಹತ್ವದ ಯೋಜನೆಯ ಅಡಿಯಲ್ಲಿ, ಇಸ್ಲಾಂಪುರ ಎಂದು ಕರೆಯಲ್ಪಡುತ್ತಿದ್ದ ಪ್ರಸಿದ್ಧ ಪ್ರದೇಶವು ಈಗ ಮತ್ತೆ ಅಧಿಕೃತವಾಗಿ ಕೃಷ್ಣ ನಗರ ಎಂದು ಬದಲಾಗಿದೆ. ಹಾಗೆಯೇ ಐತಿಹಾಸಿಕ ಬಾಬರಿ ಮಸೀದಿ ಚೌಕ್ ಅನ್ನು ಜೈನ್ ಮಂದಿರ್ ಚೌಕ್ ಎಂದು, ಸುನ್ನತ್ ನಗರವನ್ನು ಸಂತ ನಗರ ಎಂದು ಮುಸ್ತಫಾಬಾದ್ ಪ್ರದೇಶವನ್ನು ಧರಂಪುರ ಎಂದೂ ಮರುನಾಮಕರಣ ಮಾಡಲಾಗಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ನೇತೃತ್ವದ ಸಚಿವ ಸಂಪುಟ ಸಭೆಯು ಇತ್ತೀಚೆಗೆ ಈ ಮಹತ್ವದ ನಿರ್ಧಾರಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಎರಡು ತಿಂಗಳಲ್ಲಿ ಲಾಹೋರ್‌ನ ವಿವಿಧ ಭಾಗಗಳಲ್ಲಿ ಹಳೆಯ ಐತಿಹಾಸಿಕ ಹೆಸರನ್ನು ಹೊಂದಿರುವ ಹೊಸ ನಾಮಫಲಕಗಳು ಈಗಾಗಲೇ ಕಾಣಿಸಿಕೊಂಡಿವೆ. ಸದ್ಯ ಒಂಬತ್ತು ಪ್ರಮುಖ ಸ್ಥಳಗಳಲ್ಲಿ ಹಳೆಯ ಗುರುತನ್ನು ಮರುಸ್ಥಾಪಿಸಲಾಗಿದೆ. ಇವುಗಳಲ್ಲಿ ಮೌಲಾನಾ ಜಾಫರ್ ಅಲಿ ಖಾನ್ ಚೌಕ್ ಈಗ ಲಕ್ಷ್ಮಿ ಚೌಕ್ ಆಗಿ, ಸರ್ ಆಗಾ ಖಾನ್ ರಸ್ತೆ ಡೇವಿಸ್ ರಸ್ತೆಯಾಗಿ, ಫಾತಿಮಾ ಜಿನ್ನಾ ರಸ್ತೆ ಕ್ವೀನ್ಸ್ ರಸ್ತೆಯಾಗಿ ಹಾಗೂ ಪ್ರಸಿದ್ಧ ಬಾಗ್-ಎ-ಜಿನಾ ಉದ್ಯಾನವನವು ಮತ್ತೆ ಲಾರೆನ್ಸ್ ಗಾರ್ಡನ್ಸ್ ಆಗಿ ಬದಲಾಗಿವೆ.

ಜನಮಾನಸದಲ್ಲಿ ಅಚ್ಚಳಿಯದ ಹಳೆಯ ಹೆಸರು

ವಿಶೇಷವೆಂದರೆ, ಕಳೆದ ಎಂಟು ದಶಕಗಳಿಂದ ಸರ್ಕಾರಿ ದಾಖಲೆಗಳು ಮತ್ತು ಅಧಿಕೃತ ನಾಮಫಲಕಗಳಲ್ಲಿ ಹೆಸರು ಬದಲಾಗಿದ್ದರೂ, ಲಾಹೋರ್‌ನ ಸಾಮಾನ್ಯ ಜನರು, ಆಟೋ ಚಾಲಕರು ಮತ್ತು ವ್ಯಾಪಾರಿಗಳು ತಮ್ಮ ದೈನಂದಿನ ಸಂಭಾಷಣೆಯಲ್ಲಿ ಎಂದಿಗೂ ಹೊಸ ಹೆಸರು ಬಳಸುತ್ತಿರಲಿಲ್ಲ. ಬದಲಿಗೆ ಹಳೆಯ ಹೆಸರನ್ನೇ ನೆನಪಿನಲ್ಲಿಟ್ಟುಕೊಂಡಿದ್ದರು. ಲಾಹೋರ್‌ನ ಬಹುಪದರಗಳ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಮತ್ತು ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಈ ಕ್ರಾಂತಿಕಾರಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಮಹಾರಾಜ ರಂಜಿತ್ ಸಿಂಗ್ ಅವರ ಸಿಖ್ ಸಾಮ್ರಾಜ್ಯದ ಕಾಲದ ಐತಿಹಾಸಿಕ ಸ್ಮಾರಕಗಳು, ಹಳೆಯ ಚರ್ಚ್‌ಗಳು, ಗರಡಿ ಮನೆಗಳು (ಅಖಾಡ) ಮತ್ತು ಹಳೆಯ ಕ್ರಿಕೆಟ್ ಮೈದಾನಗಳನ್ನು ಸಹ ಜೀರ್ಣೋದ್ಧಾರ ಮಾಡಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries