ನವದೆಹಲಿ: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳೊಂದಿಗೆ ಭಾರತವು ಹಂಚಿಕೊಂಡಿರುವ 6 ಸಾವಿರ ಕಿ.ಮೀ ಗಡಿ ಉದ್ದಕ್ಕೂ 'ಸ್ಮಾರ್ಟ್ ಬಾರ್ಡರ್' ಯೋಜನೆಯನ್ನು ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ಆರಂಭಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ(ಮೇ 22) ಹೇಳಿದ್ದಾರೆ.
ಈ ಯೋಜನೆಯಿಂದ ಒಳನುಸುಳುಕೋರರಿಗೆ ಗಡಿದಾಟಿ ಬರುವುದು ಅಸಾಧ್ಯವಾಗಲಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಕೆಲವು ಸಮುದಾಯದ ಪಿತೂರಿಯನ್ನು ಇದು ತಡೆಯುತ್ತದೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರವು ದೇಶದಲ್ಲಿರುವ ಪ್ರತಿಯೊಬ್ಬ ಒಳನುಸುಳುಕೋರರನ್ನು ಪತ್ತೆಹಚ್ಚಿ, ಅವರನ್ನು ದೇಶದಿಂದ ಹೊರದಬ್ಬಲಿದೆ. ಬಿಎಸ್‌ಎಫ್‌ನ 60ನೇ ವರ್ಷಾಚರಣೆಯ ಸಂದರ್ಭದಲ್ಲೇ ಸ್ಮಾರ್ಟ್ ಬಾರ್ಡರ್ ಯೋಜನೆಯು ಆರಂಭವಾಗಲಿದೆ. ಇದರಲ್ಲಿ ಹೊಸ ತಂತ್ರಜ್ಞಾನ, ಡ್ರೋನ್, ರೇಡಾರ್‌ಗಳು ಮತ್ತು ಸ್ಮಾರ್ಟ್ ಕ್ಯಾಮೆರಾಗಳನ್ನು ಬಳಸಲಾಗುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಗಡಿಯಲ್ಲಿನ ಸುರಕ್ಷತೆಯನ್ನು ಮುಂದಿನ ವರ್ಷದೊಳಗೆ ಮೋದಿ ಸರ್ಕಾರವು ಹೆಚ್ಚಿಸಲಿದೆ. ಅದರಲ್ಲೂ ತ್ರಿಪುರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರದಲ್ಲಿದ್ದು, ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಈ ಕುರಿತು ಸಭೆ ನಡೆಸಲಿದ್ದೇವೆ. ಮುಂದಿನ ದಿನಗಳಲ್ಲಿ ಒಳನುಸುಳುಕೋರರು ಸಂಪೂರ್ಣವಾಗಿ ಇಲ್ಲವಾಗಲಿದ್ದಾರೆ ಎಂದು ಹೇಳಿದ್ದಾರೆ.

