ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದಲ್ಲಿ, ಕೆಎಸ್ಸಾರ್ಟೀಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿದ್ದ ಕಾಂಗ್ರೆಸ್ ನೇತೃತ್ವ ವಚನ ಪಾಲಿಸಿ, ನೀಡಿದ ಭರವಸೆ ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಮಹಿಳಾ ಮೋರ್ಛಾ ಕಾರ್ಯಕರ್ತರು ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮಗಳಿಂದ ಗೆದ್ದು ಬಂದಿರುವ ಐಕ್ಯರಂಗ, ಹನ್ನೆರಡು ದಿವಸಗಳ ನಂತರ ತನ್ನ ಮುಖ್ಯ ಮಂತ್ರಿ ಅಭ್ಯರ್ಥಿಯನ್ನು ಆಯ್ಕೆಮಾಡಿಕೊಳ್ಳುತ್ತಿದ್ದಂತೆ ಪ್ರಥಮ ಬಾರಿಗೆ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಗಿ ಬಂದಿತು.
ಕಾಸರಗೋಡು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು ಬಸ್ಸನ್ನೇರಿ ಟಿಕೆಟ್ ರಹಿತ ಪ್ರಯಾಣ ನಡೆಸುವ ಮೂಲಕ ತಮ್ಮ ಪ್ರತಿಭಟನೆ ನಡೆಸಲು ಮುಂದಾದರು. ಆದರೆ ಚಾಲಕ ಆಗಮಿಸದ ಹಿನ್ನೆಲೆಯಲ್ಲಿ ಬಸ್ಸಿಂದ ಇಳಿದು, ಬಸ್ ನಿಲ್ದಾಣ ದ್ವಾರದ ಬಳಿ ಧರಣಿ ಕುಳಿತು ಪ್ರತಿಭಟಿಸಿದರು.
ಕೇರಳದಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಮಾಡಿ ಅಧಿಕಾರಕ್ಕೇರಿ, ಸಂಪುಟ ರಚನೆಯಾಗುವ ಮುನ್ನವೇ ನಡೆದ ಮೊದಲ ಪ್ರತಿಭಟನಾ ಸತ್ಯಾಗ್ರಹ ಇದಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ, ಕೆ.ಎಸ್ ರಮಣಿ, ಮಧೂರು ಗ್ರಾಪಂ ಅಧ್ಯಕ್ಷ ಸುಜ್ಞಾನಿ ಶ್ಯನುಭಾಗ್, ಬದಿಯಡ್ಕ ಗ್ರಾಪಂ ಉಪಾಧ್ಯಕ್ಷೆ ಕೆ.ಎಂ ಅಶ್ವಿನಿ ಮೊದಲಾದವರು ನೇತೃತ್ವ ನೀಡಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್ ಅಶ್ವಿನಿ ಧರಣಿ ಉದ್ಘಾಟಿಸಿ ಮಾತನಾಡಿ, ಐಕ್ಯರಂಗ ಸರ್ಕಾರ ಆಡಳಿತಕ್ಕೆ ಬಂದರೆ ಕೆಎಸ್ಸಾರ್ಟೀಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸಹಿತ ವಿವಿಧ ಗ್ಯಾರಂಟಿಗಳನ್ನು ಕಾಂಗ್ರೆಸ್ ನೇತೃತ್ವ ಘೋಷಿಸಿತ್ತು. ಮತ್ತು ಅದನ್ನೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತ್ತು. ಫಲಿತಾಂಶ ಬಂದ ಹತ್ತೇ ನಿಮಿಷದಲ್ಲಿ ಮುಖ್ಯಮಂತ್ರಿ ಘೋಷಣೆ ಎಂದವರು ಹನ್ನೆರಡು ದಿವಸಗಳ ನಂತರ ಸಿಎಂ ಆಯ್ಕೆ ನಡೆಸಿದ್ದಾರೆ. ಆಡಳಿತ ಸ್ತಂಬನದ ಜತೆಗೆ, ನೀಡಿದ ಭರವಸೆಗಳ ಬಗ್ಗೆ ಯಾವ ಗಮನವನ್ನೂ ಹರಿಸದ ಹಿನ್ನೆಲೆಯಲ್ಲಿ ಜನಾಗ್ರಹದ ಮೇರೆಗೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸತ್ಯಾಗ್ರಹ ನಡೆಸಬೇಕಾಗಿ ಬಂದಿರುವುದಾಗಿ ಎಂ. ಎಲ್. ಅಶ್ವಿನಿ ತಿಳಿಸಿದರು.
ನಂತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು. ಬಿಜೆಪಿ ಮಹಿಳಾ ಮೋರ್ಛಾ ನೇತೃತ್ವದಲ್ಲಿ ಕೇರಳದ ಎಲ್ಲಾ ಜಿಲ್ಲೆಗಳಲ್ಲೂ ಸಮಾನವಾದ ರೀತಿಯ ಪ್ರತಿಭಟನೆಗಳು ನಡೆದಿತ್ತು.

