ನವದೆಹಲಿ: ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿ (ಯುಎಪಿಎ) ಜಾಮೀನು ನೀಡುವ ವಿಷಯವನ್ನು ವಿಸ್ತೃತ ಪೀಠ ಪರಿಗಣಿಸಬೇಕಾಗಬಹುದು ಎಂದು ದೆಹಲಿ ಪೊಲೀಸರ ಪರ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದಾರೆ.
ಈ ಸಂಬಂಧ ಸುಪ್ರೀಂ ಕೋರ್ಟ್‌ನ ಬೇರೆ ಬೇರೆ ಪೀಠಗಳು ನೀಡಿದ ತೀರ್ಪುಗಳು ವ್ಯತಿರಿಕ್ತವಾಗಿ ಇರುವುದರಿಂದ ಅದನ್ನು ವಿಸ್ತೃತ ಪೀಠ ಪರಿಗಣಿಸುವುದು ಸೂಕ್ತ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ.ವರಾಳೆ ಪೀಠದ ಮುಂದೆ ಪ್ರತಿಪಾದಿಸಿದರು.
ದೆಹಲಿ ಗಲಭೆಯ ಪಿತೂರಿ ಪ್ರಕರಣದ ಆರೋಪಿಗಳಾದ ತಸ್ಲೀಮ್ ಅಹ್ಮದ್ ಮತ್ತು ಖಾಲಿದ್ ಸೈಫಿ ಅವರಿಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ್ದರ ವಿರುದ್ಧ ಸಲ್ಲಿಸಲಾಗಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ಸೈಯದ್ ಇಫ್ತಿಕರ್ ಅಂದ್ರಾಬಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೇ 18ರಂದು ನೀಡಿರುವ ತೀರ್ಪನ್ನು ಪರಿಶೀಲಿಸಲು ಸಮಯ ಬೇಕು ಎಂದು ರಾಜು ಅವರು ಮೇ 19ರಂದು ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠವು ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಿತು.
ಮೇ 18ರಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಅಂದ್ರಾಬಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಪಿಎ ಪ್ರಕರಣಗಳಲ್ಲಿಯೂ 'ಜಾಮೀನು ನಿಯಮ, ಜೈಲು ಅಪವಾದ' ಎಂಬುದನ್ನು ತೀರ್ಪಿನಲ್ಲಿ ಉಲ್ಲೇಖಿಸಿತು. ಅಲ್ಲದೆ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿದ ಕುರಿತು ಆಕ್ಷೇಪ ವ್ಯಕ್ತಪಡಿಸಿತು.

