ಕೋಲ್ಕತ್ತ: ಬಿಜೆಪಿ ಕಾರ್ಯಕರ್ತರು ಸೋಮವಾರ ಪಶ್ಚಿಮ ಬಂಗಾಳದಾದ್ಯಂತ ಗೆಲುವಿನ ಸಂಭ್ರಮ ಆಚರಿಸಿದ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಕಚೇರಿಗಳಿಗೆ ಬೆಂಕಿ ಹಚ್ಚಿದ ಮತ್ತು ಧ್ವಂಸಗೊಳಿಸಿದ ಘಟನೆಗಳು ವರದಿಯಾಗಿವೆ.
ಕೋಲ್ಕತ್ತದ ಟಾಲಿಗಂಜ್ ಮತ್ತು ಕಸ್ಬಾ, ನಗರದ ಹೊರವಲಯದ ಬರುಯ್‌ಪುರ, ಕಮರ್‌ಹಾಟಿ, ಬಾರಾನಗರ್ ಮತ್ತು ಹೌರಾ ಹಾಗೂ ಬರಾಮ್‌ಪುರದಲ್ಲಿ ಟಿಎಂಸಿ ಕಚೇರಿಗಳ ಮೇಲೆ ಸೋಮವಾರ ಮಧ್ಯಾಹ್ನದ ಬಳಿಕ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಚೇರಿಗಳನ್ನು ಧ್ವಂಸಗೊಳಿಸಿದ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಘಟನೆ ಸಂಬಂಧ ಸ್ಥಳೀಯ ಪೊಲೀಸರಿಂದ ವರದಿ ಕೇಳಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮ್ಮ ಪಕ್ಷದ ಕಾರ್ಯಕರ್ತರು ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ನಾಯಕ ರಾಹುಲ್ ಸಿನ್ಹಾ ಅವರು ಅಲ್ಲಗಳೆದಿದ್ದಾರೆ. ಚುನಾವಣಾ ಫಲಿತಾಂಶದಿಂದ ಹತಾಶರಾಗಿರುವ ಟಿಎಂಸಿ ಕಾರ್ಯಕರ್ತರು ತಮ್ಮ ನಾಯಕರ ಮೇಲಿನ ಆಕ್ರೋಶ ಹೊರಹಾಕಲು ಈ ದಾಳಿ ನಡೆಸಿರಬಹುದು ಎಂದು ಅವರು ಹೇಳಿದ್ದಾರೆ.
ಟಾಲಿಗಂಜ್‌ನ ನೇತಾಜಿನಗರದಲ್ಲಿ ಟಿಎಂಸಿ ಅಭ್ಯರ್ಥಿ ಮತ್ತು ಮಾಜಿ ಸಚಿವ ಅರೂಪ್ ಬಿಶ್ವಾಸ್ ಅವರ ಕಚೇರಿಯನ್ನು ಗುಂಪೊಂದು ಧ್ವಂಸಗೊಳಿಸಿದೆ. ರೂಬಿ ಕ್ರಾಸಿಂಗ್‌ನಲ್ಲಿ ಬಿಜೆಪಿಯ ಬಾವುಟ ಹಿಡಿದಿದ್ದ ಕೆಲವರು ಟಿಎಂಸಿ ಪಾಲಿಕೆ ಸದಸ್ಯ ಸುಶಾಂತ್ ಘೋಷ್ ಅವರ ಕಚೇರಿಯ ಸ್ವತ್ತುಗಳನ್ನು ಹಾನಿಗೊಳಿಸಿದ್ದಾರೆ.
ಕಚೇರಿ ಮೇಲಿನ ದಾಳಿಯ ಘಟನೆಗಳನ್ನು ಖಂಡಿಸಿರುವ ಟಿಎಂಸಿ, 'ಬಿಜೆಪಿಯು ಅಧಿಕಾರಕ್ಕೆ ಬಂದ ಕೂಡಲೇ ತನ್ನ ನಿಜ ಬಣ್ಣ ತೋರಿಸಿದೆ' ಎಂದು ಟೀಕಿಸಿದೆ.

