HEALTH TIPS

ರಾಜ್ಯಸಭೆಯ ಆರು ಸಂಸದರ ಸದಸ್ಯತ್ವ ರದ್ದತಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಮಾನ್‌

 ಚಂಡೀಗಢ: ಬಿಜೆಪಿಗೆ ಸೇರ್ಪಡೆಯಾಗಿರುವ ರಾಜ್ಯಸಭೆಯ ಆರು ಮಂದಿ ಎಎಪಿ ಸದಸ್ಯರ ಸದಸ್ಯತ್ವ ರದ್ದು ಮಾಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮಂಗಳವಾರ ಮನವಿ ಮಾಡಿದ್ದಾರೆ.


ಅಲ್ಲದೇ, ಪಕ್ಷಾಂತರ ಮಾಡಿದ ಸದಸ್ಯರನ್ನು ಅಧಿಕಾರದಿಂದ ತೆಗೆದುಹಾಕುವುದಕ್ಕೆ ಸಂಬಂಧಿಸಿದ ಅವಕಾಶವನ್ನು ಸಂವಿಧಾನದಲ್ಲಿ ಸೇರಿಸುವಂತೆಯೂ ಅವರು ಒತ್ತಾಯಿಸಿದ್ದಾರೆ.

ಆಮ್‌ ಆದ್ಮಿ ಪಕ್ಷದ(ಎಎಪಿ) ಶಾಸಕರೊಂದಿಗೆ ದೆಹಲಿಗೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಈ ಕುರಿತು ಅವರು ಮನವಿ ಸಲ್ಲಿಸಿದ್ದಾರೆ.

ಮುರ್ಮು ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್‌,'ಪಕ್ಷದ ಏಳು ಸಂಸದರು ಪಕ್ಷಾಂತರ ಮಾಡಿರುವುದು ಸಂವಿಧಾನದ ಹತ್ಯೆಯೇ ಸರಿ. ಈ ನಡೆ ಅಸಾಂವಿಧಾನಿಕ. ಈ ಕುರಿತು ರಾಷ್ಟ್ರಪತಿ ಅವರಿಗೆ ವಿವರಣೆ ನೀಡಿದ್ದೇವೆ' ಎಂದರು.

'ಪಂಜಾಬ್‌ನಲ್ಲಿ ಬಿಜೆಪಿ ಇಬ್ಬರು ಶಾಸಕರನ್ನು ಹೊಂದಿದೆ. ಆದರೆ, ಈ ಬೆಳವಣಿಗೆ ಬಳಿಕ ರಾಜ್ಯಸಭೆಯಲ್ಲಿ ಅದು ಆರು ಸಂಸದರನ್ನು ಹೊಂದಿದಂತಾಗಿದೆ. ಇದು ಹೇಗೆ ಸಾಧ್ಯ? ಇದು ಸಂವಿಧಾನದ ಅಣಕವಲ್ಲವೇ' ಎಂದು ಪ್ರಶ್ನಿಸಿದರು.

'ಬಿಜೆಪಿಗೆ ಸೇರಿರುವವರು ಕ್ರಾಂತಿಕಾರಿಗಳೇ ಆಗಿದ್ದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ತೆರವಾದ ಸ್ಥಾನಗಳಿಗೆ ಪಕ್ಷವು(ಎಎಪಿ) ಬೇರೆಯವರನ್ನು ನಾಮನಿರ್ದೇಶನ ಮಾಡುತ್ತಿತ್ತು' ಎಂದರು.

ರಾಜ್ಯಸಭೆಯಲ್ಲಿ ಎಎಪಿಯ 10 ಸದಸ್ಯರು ಇದ್ದರು. ಈ ಪೈಕಿ ರಾಘವ್ ಚಡ್ಡಾ, ಅಶೋಕ್‌ ಮಿತ್ತಲ್, ಹರಭಜನ್ ಸಿಂಗ್, ಸಂದೀಪ್‌ ಪಾಠಕ್, ರಾಜೇಂದ್ರ ಗುಪ್ತ, ವಿಕ್ರಮಿತ್‌ ಸಾಹ್ನಿ ಹಾಗೂ ಸ್ವಾತಿ ಮಾಲಿವಾಲ್ ಇತ್ತೀಚೆಗೆ ಎಎಪಿ ತೊರೆದು ಬಿಜೆಪಿ ಸೇರಿದ್ದಾರೆ. ಇವರಲ್ಲಿ ಆರು ಸಂಸದರು ಪಂಜಾಬ್‌ನಿಂದ ಆಯ್ಕೆಯಾದವರು.


ಎಎಪಿಯಿಂದ ಅಪಾಯಕಾರಿ ಸೇಡಿನ ರಾಜಕಾರಣ: ಚಡ್ಡಾ

ನವದೆಹಲಿ:'ಪಂಜಾಬ್‌ನಲ್ಲಿರುವ ಆಮ್‌ ಆದ್ಮಿ ಪಕ್ಷ(ಎಎಪಿ) ನೇತೃತ್ವದ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ' ಎಂದು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮಂಗಳವಾರ ಆರೋಪಿಸಿದ್ದಾರೆ. 'ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಸಂಸದರೇ ಅದರ ಸೇಡಿನ ರಾಜಕಾರಣದ ಗುರಿಯಾಗಿದ್ದು ಇದಕ್ಕಾಗಿ ರಾಜ್ಯದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ' ಎಂದು ಟೀಕಿಸಿದ್ದಾರೆ.

ತಮ್ಮೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿರುವ ಇತರ ಮೂವರು ಸಂಸದರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮನವಿ ಸಲ್ಲಿಸಿದರು.

'ಎಎಪಿ ತೊರೆದಿದ್ದಕ್ಕಾಗಿ ನಮಗೆ ರಾಜಕೀಯ ಪ್ರೇರಿತ ಕಿರುಕುಳ ನೀಡಲಾಗುತ್ತಿದೆ' ಎಂದು ಅವರು ಮುರ್ಮು ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಆರೋಪಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚಡ್ಡಾ'ಎಎಪಿಗೆ ವಿಧೇಯರಾಗಿದ್ದಾಗ ನಮ್ಮನ್ನು ಸುಸಂಸ್ಕೃತರು ಎಂದು ಪರಿಗಣಿಸಲಾಗುತ್ತಿತ್ತು. ಈಗ ನಾವು ಪಕ್ಷ ತೊರೆದ ತಕ್ಷಣ ನಮಗೆ ಭ್ರಷ್ಟರು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ' ಎಂದು ದೂರಿದರು.

'ಇತರ ಎಲ್ಲ ಪಕ್ಷಗಳು ಸೇಡಿನ ರಾಜಕೀಯ ಮಾಡುತ್ತಿವೆ ಎಂದು ಎಎಪಿ ಆರೋಪ ಮಾಡುತ್ತದೆ. ಈಗ ಇದೇ ಎಎಪಿ ಅಪಾಯಕಾರಿ ಪ್ರತೀಕಾರದ ರಾಜಕಾರಣದಲ್ಲಿ ತೊಡಗಿದೆ' ಎಂದು ಆರೋಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries