ಕೋಲ್ಕತ್ತ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಕೋಲ್ಕತ್ತ ನಗರದ ಡಿಸಿಪಿ ಶಂತನು ಸಿನ್ಹಾ ಬಿಸ್ವಾಸ್ ಅವರ ವಿರುದ್ಧ ಜಾರಿ ನಿರ್ದೇಶನಾಲಯವು(ಇ.ಡಿ) ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
'ಐದು ಬಾರಿ ಸಮನ್ಸ್ ನೀಡಿದ್ದರೂ ಬಿಸ್ವಾಸ್ ವಿಚಾರಣೆಗೆ ಹಾಜರಾಗಿಲ್ಲ.
ತನಿಖೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅವರು ವಿದೇಶಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋನ ಪಪ್ಪು ಎಂಬ ವ್ಯಕ್ತಿ ಭಾಗಿಯಾಗಿರುವ ಭೂಕಬಳಿಕೆ ಮತ್ತು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪದ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಬಿಸ್ವಾಸ್ ಅವರ ಕೋಲ್ಕತ್ತದಲ್ಲಿನ ನಿವಾಸದಲ್ಲಿ ಇ.ಡಿ ಶೋಧ ನಡೆಸಿದೆ.
ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಬಿಸ್ವಾಸ್ ಅವರ ಇಬ್ಬರು ಪುತ್ರರಿಗೂ ಇ.ಡಿ ಸಮನ್ಸ್ ನೀಡಿತ್ತು. ಅವರೂ ವಿಚಾರಣೆಗೆ ಹಾಜರಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮರಳು ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದ ಆರ್ಥಿಕ ಅವ್ಯವಹಾರಗಳ ಆರೋಪದಡಿಯೂ ಬಿಸ್ವಾಸ್ ಅವರಿಗೆ ಸಮನ್ಸ್ ಜಾರಿಯಾಗಿತ್ತು. ಅವರ ಪರವಾಗಿ ವಕೀಲರು ಹಾಜರಾಗಿದ್ದರು.

