ಕಣ್ಣೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಯುವಜನತೆಯಲ್ಲಿ ಹೆಚ್ಚುತ್ತಿರುವ ಆಕ್ರೋಶದ ಪ್ರತಿಬಿಂಬವಾಗಿರುವ ಇಂತಹ ವೇದಿಕೆಗಳನ್ನು ಬಲವಂತವಾಗಿ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
'ಸಿಜೆಪಿ' ಚಳವಳಿಯು ಯುವ ಪೀಳಿಗೆಯ ಭಾವನೆಗಳ ಅಭಿವ್ಯಕ್ತಿಯಾಗಿದೆ. ಅವರ ಕಳಕಳಿ ಮತ್ತು ಸಮಸ್ಯೆಗಳನ್ನು ಸರ್ಕಾರ ಹೀಗೆಯೇ ನಿರ್ಲಕ್ಷಿಸುತ್ತಾ ಹೋದರೆ, ಈ ಡಿಜಿಟಲ್ ಪ್ರತಿಭಟನೆ ಮುಂದಿನ ದಿನಗಳಲ್ಲಿ ದೊಡ್ಡ ರಾಜಕೀಯ ಚಳವಳಿಯಾಗಿ ರೂಪಾಂತರಗೊಳ್ಳಬಹುದು ಎಂದು ವೇಣುಗೋಪಾಲ್ ಹೇಳಿದ್ದಾರೆ.
ದೇಶದ ಇಂದಿನ ಅತಿ ದೊಡ್ಡ ಸಮಸ್ಯೆ ಎಂದರೆ ಜನರ ಕಷ್ಟಗಳಿಗೆ ಸ್ಪಂದಿಸುವ ಸರ್ಕಾರ ಅಧಿಕಾರದಲ್ಲಿಲ್ಲದಿರುವುದು. ಯುವಜನರು ತಮ್ಮ ಭಾವನೆಗಳನ್ನು ಗೌರವಿಸುವ ಆಡಳಿತವನ್ನು ಬಯಸುತ್ತಾರೆ. ಅದನ್ನು ಬಿಟ್ಟು ಇಂತಹ ಚಳವಳಿಗಳನ್ನು ಹತ್ತಿಕ್ಕಲು ನೋಡಿದರೆ, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಗಗನಕ್ಕೇರುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿದಿನ ಹೆಚ್ಚುತ್ತಿದ್ದು, ಮುಂಬರುವ ದಿನಗಳು ದೇಶದ ಜನರಿಗೆ ಮತ್ತಷ್ಟು ಕಷ್ಟಕರವಾಗಲಿವೆ. ಈ ನಿರಾಸೆಯೇ ಯುವಕರನ್ನು ಪ್ರತಿಭಟನೆಯತ್ತ ತಳ್ಳುತ್ತಿದೆ ಎಂದಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಆರೋಪಿ ಶುಭಂ ಜೂ.6ರವರೆಗೆ ನ್ಯಾಯಾಂಗ ವಶಕ್ಕೆಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ಮನೆಗೆ ಪೊಲೀಸ್ ಭದ್ರತೆ
ಪ್ರಧಾನಮಂತ್ರಿಯವರು ದೇಶದ ಆಂತರಿಕ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸುವ ಬದಲು, ವಿದೇಶಿ ಪ್ರವಾಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಎಂಬ ವಿಡಂಬನಾತ್ಮಕ ಖಾತೆಯು ಯುವಜನರ ಗಮನ ಸೆಳೆದಿತ್ತು. ಕಳೆದ ಗುರುವಾರ ಈ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಯಿತು. ಇದರ ಬೆನ್ನಲ್ಲೇ, ʼಕಾಕ್ರೋಚ್ ಈಸ್ ಬ್ಯಾಕ್ʼ ಎಂಬ ಟ್ಯಾಗ್‌ಲೈನ್‌ನೊಂದಿಗೆ ಮತ್ತೊಂದು ಹೊಸ ಖಾತೆ ಸೋಷಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷವಾಗಿ ಹರಿದಾಡುತ್ತಿದೆ.

