ನವದೆಹಲಿ: ಕೇರಳಂ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಪಿಣರಾಯಿ ವಿಜಯನ್ ಅವರನ್ನು ಆಯ್ಕೆ ಮಾಡಿರುವುದು ಸಿಪಿಎಂ ಪಾಲಿಟ್ ಬ್ಯೂರೊದಲ್ಲಿ ಒಡಕು ಮೂಡಿಸಿದೆ. ಹೊಸ ಮತ್ತು ಯುವ ನಾಯಕರೊಬ್ಬರಿಗೆ ಆ ಜವಾಬ್ದಾರಿ ನೀಡಿದ್ದರೆ ಪಕ್ಷಕ್ಕೆ ಉಪಯೋಗ ಆಗುತ್ತಿತ್ತು ಎಂದು ಪಾಲಿಟ್ ಬ್ಯೂರೊದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ 81 ವರ್ಷದ ಪಿಣರಾಯಿ ಅವರ ಹೆಸರನ್ನು ಸಿಪಿಎಂ ಕೇರಳಂ ರಾಜ್ಯ ಸಮಿತಿ ಕಳೆದ ಗುರುವಾರ ಸೂಚಿಸಿತ್ತು. ಆ ಬಳಿಕ ನಡೆದ ಸಿಪಿಎಂ ಪಾಲಿಟ್ ಬ್ಯೂರೊ ಆನ್‌ಲೈನ್ ಸಭೆ ನಡೆದಿತ್ತು.
ಚುನಾವಣಾ ಫಲಿತಾಂಶದ ಪರಾಮರ್ಶೆ ನಡೆಸಲು ಕೇರಳಂ ರಾಜ್ಯ ಸಮಿತಿಯು ಕಳೆದ ವಾರ ಸಭೆ ನಡೆಸಿತ್ತು. ವಿರೋಧ ಪಕ್ಷದ ನಾಯಕ ಯಾರಾಗಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು. ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಮತ್ತು ಮಾಜಿ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ಅವರ ಹೆಸರು ಮುಂಚೂಣಿಗೆ ಬಂದಿತ್ತು.
ರಾಜ್ಯ ಸಮಿತಿ ಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಿಜಯನ್ ನೇತೃತ್ವದ ಸರ್ಕಾರ ಮತ್ತು ಪಕ್ಷದ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದಿದ್ದವು. ಆದರೂ, ಸಮಿತಿಯು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ವಿಜಯನ್ ಅವರ ಹೆಸರನ್ನು ಮಾತ್ರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇರಳಂ ರಾಜ್ಯ ಸಮಿತಿ ಮುಂದಿಟ್ಟ ಪ್ರಸ್ತಾವದ ಬಗ್ಗೆ ಚರ್ಚಿಸಲು ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಪಾಲಿಟ್ ಬ್ಯೂರೊದ ಸಭೆ ಕರೆದಿದ್ದರು. ಸಭೆಯಲ್ಲಿ ಬೇಬಿ, ಮೊಹಮ್ಮದ್ ಸಲೀಮ್, ತಪನ್ ಸೇನ್ ಮತ್ತು ಕೇರಳ ಸಿಪಿಎಂ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹತ್ತು ಸದಸ್ಯರು ವಿಜಯನ್ ಅವರನ್ನು ಬೆಂಬಲಿಸಿದ್ದಾರೆ. ಬಿ.ವಿ. ರಾಘವುಲು, ಅಶೋಕ್ ಧವ್ಲೆ ಮತ್ತು ವಿಜೂ ಕೃಷ್ಣನ್ ಸೇರಿದಂತೆ ಏಳು ನಾಯಕರು ಈ ಪ್ರಸ್ತಾವವನ್ನು ವಿರೋಧಿಸಿದರು ಎಂದು ಮೂಲಗಳು ಹೇಳಿವೆ.
ವಿಜಯನ್ ಅವರು ಈ ಬಾರಿ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಈ ಹಿಂದೆ ನಡೆದ ಪಾಲಿಟ್ ಬ್ಯೂರೊ ಸಭೆಯಲ್ಲಿ ಕೆಲವು ನಾಯಕರು ಆಭಿಪ್ರಾಯಪಟ್ಟಿದ್ದರು. ಅವರು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿ ಇರದಿದ್ದಲ್ಲಿ, ಆಡಳಿತ ವಿರೋಧಿ ಅಲೆಯನ್ನು ಅಲ್ಪ ತಗ್ಗಿಸಬಹುದಿತ್ತು ಎಂದು ಹೇಳಿದ್ದರು.

