ನವದೆಹಲಿ: ಭಾರತ ಇನ್ನು ಹಳೆಯ ಭಾರತವಾಗಿ ಉಳಿದಿಲ್ಲ. ಶತ್ರು ಮನೆಗೆ ನುಗ್ಗಿ ಹೊಡೆಯುವ ತಾಕತ್ತು ನಮಗಿದೆ, ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಭಾರತ ನಡೆಸಿದ್ದ ಆಪರೇಷನ್ ಸಿಂಧೂರ್ ಕುರಿತು ಮಾತನಾಡಿರುವ ರಕ್ಷಣಾ ಸಚಿವ, ರಾಜನಾಥ್ ಸಿಂಗ್ ನೆರೆ ದೇಶಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ (ಏ.30) ನಡೆದ ಎಎನ್ಐ (ANI) ರಾಷ್ಟ್ರೀಯ ಭದ್ರತಾ ಶೃಂಗಸಭೆ 2.0 ನಲ್ಲಿ ಮಾತನಾಡಿದ ಸಿಂಗ್, ಭಾರತವು ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದ್ದು ನಮ್ಮ ಸಾಮರ್ಥ್ಯ ಕಡಿಮೆಯಾಗಿ ಅಲ್ಲ, ಬದಲಾಗಿ ನಮ್ಮದೇ ಆದ ಷರತ್ತುಗಳ ಮೇಲೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಐಪಿಎಲ್ನಲ್ಲಿ ವೇಪಿಂಗ್ ಇದೇ ಮೊದಲಲ್ಲ! ಪರಾಗ್ ವಿಡಿಯೋ ವೈರಲ್; ಇ-ಸಿಗರೇಟ್ ಸೇದಿದ್ದ ಆರ್ಸಿಬಿ ಆಟಗಾರರು ಯಾರು ಗೊತ್ತೆ? Riyan Parag
ಇದು ಅಂತ್ಯವಲ್ಲ, ಆರಂಭ!
ನಾವು ಆಪರೇಷನ್ ಸಿಂಧೂರ್ ಅನ್ನು ಸ್ವಯಂಪ್ರೇರಣೆಯಿಂದ ನಿಲ್ಲಿಸಿದ್ದೇವೆ. ಆದರೆ, ಅನಿವಾರ್ಯತೆ ಎದುರಾದರೆ ಪಾಕಿಸ್ತಾನದ ವಿರುದ್ಧ ಎಷ್ಟು ದಿನ ಬೇಕಾದರೂ ಯುದ್ಧ ಮಾಡಲು ನಾವು ಸಿದ್ಧರಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ಈಗ ಮೊದಲಿಗಿಂತಲೂ ಸಾವಿರ ಪಟ್ಟು ಬಲಿಷ್ಠವಾಗಿವೆ ಎಂದು ಸಿಂಗ್ ಹೇಳಿದ್ದಾರೆ. ರಾವಣನ ಹೊಕ್ಕುಳಲ್ಲಿರುವ ಅಮೃತದಂತೆ ಭಯೋತ್ಪಾದನೆ!
ಭಯೋತ್ಪಾದನೆಯನ್ನು ಹೋಗಲಾಡಿಸುವ ಬಗ್ಗೆ ಮಾತನಾಡುತ್ತಾ ರಾಜನಾಥ್ ಸಿಂಗ್, ಭಯೋತ್ಪಾದನೆಯು ರಾವಣನ ಹೊಕ್ಕುಳಲ್ಲಿರುವ ಅಮೃತದಂತಿದೆ. ರಾವಣನ ಒಂದು ತಲೆ ಕತ್ತರಿಸಿದರೆ ಇನ್ನೊಂದು ಹೇಗೆ ಬೆಳೆಯುತ್ತಿತ್ತೋ, ಹಾಗೆಯೇ ಉಗ್ರರನ್ನು ಕೊಂದರೂ ಅವರ ಸೈದ್ಧಾಂತಿಕ ಬೇರುಗಳು ಜೀವಂತವಾಗಿದ್ದರೆ ಹೊಸ ಉಗ್ರರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ನಾವು ಆ ಸೈದ್ಧಾಂತಿಕ ಮತ್ತು ರಾಜಕೀಯ ಬೇರುಗಳನ್ನೇ ಒಣಗಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಐಟಿ (IT) ಅಂದರೆ ನಮಗೆ ಮಾಹಿತಿ ತಂತ್ರಜ್ಞಾನ, ಅವರಿಗೆ ಇಂಟರ್ನ್ಯಾಷನಲ್ ಟೆರರಿಸಂ!
ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಲೇವಡಿ ಮಾಡಿದ ರಕ್ಷಣಾ ಸಚಿವರು, ಭಾರತ ಮತ್ತು ಪಾಕಿಸ್ತಾನ ಎರಡೂ ಒಂದೇ ಕಾಲಕ್ಕೆ ಸ್ವಾತಂತ್ರ್ಯ ಪಡೆದವು. ಇಂದು ಭಾರತವು ತನ್ನ ಐಟಿ (Information Technology) ಗಾಗಿ ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿದೆ. ಆದರೆ, ಪಾಕಿಸ್ತಾನವು ಮತ್ತೊಂದು ಐಟಿ (International Terrorism) ಕೇಂದ್ರವಾಗಿ ಗುರುತಿಸಿಕೊಂಡಿದೆ, ಎಂದು ವ್ಯಂಗ್ಯವಾಡಿದ್ದಾರೆ. ಮೋದಿಯವರ ಝೀರೋ ಟಾಲರೆನ್ಸ್ ನೀತಿ
ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತದ ರಕ್ಷಣಾ ನೀತಿ ಸಂಪೂರ್ಣ ಬದಲಾಗಿದೆ. ಹಿಂದೆಲ್ಲಾ ಭಯೋತ್ಪಾದಕ ದಾಳಿ ನಡೆದಾಗ ಭಾರತ ಕೇವಲ ರಾಜತಾಂತ್ರಿಕ ಹೇಳಿಕೆಗಳನ್ನು ನೀಡಿ ಸುಮ್ಮನಾಗುತ್ತಿತ್ತು. ಆದರೆ ಆಪರೇಷನ್ ಸಿಂಧೂರ್ ಮೂಲಕ ಜಗತ್ತಿಗೆ ಒಂದು ಸ್ಪಷ್ಟ ಸಂದೇಶ ರವಾನೆಯಾಗಿದೆ. ನಮ್ಮ ನೆಲಕ್ಕೆ ಕೈ ಹಾಕಿದರೆ, ನೀವು ಸುರಕ್ಷಿತವಾಗಿರಲು ಸಾಧ್ಯವಿಲ್ಲ. ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯನ್ನು ಸಹಿಸದ ಶೂನ್ಯ ಸಹಿಷ್ಣುತೆ (Zero Tolerance) ನೀತಿಯನ್ನು ಭಾರತ ಗಟ್ಟಿಯಾಗಿ ಪಾಲಿಸುತ್ತಿದೆ.
ಯುದ್ಧಕ್ಕೂ ನಾವೀಗ ರೆಡಿ!
ಭಾರತದ ಮಿಲಿಟರಿ ಕೈಗಾರಿಕಾ ಸಂಕೀರ್ಣವು ಈಗ ಕೇವಲ ಶಾಂತಿ ಕಾಲಕ್ಕೆ ಮಾತ್ರವಲ್ಲದೆ, ಯುದ್ಧದ ಸಮಯದಲ್ಲಿ ಬೇಕಾದ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಪೂರೈಸಲು ಸಜ್ಜಾಗಿದೆ. ಹಠಾತ್ ಅಗತ್ಯದ ಸಮಯದಲ್ಲಿ ನಮ್ಮ ಸಾಮರ್ಥ್ಯಗಳನ್ನು ಹತ್ತು ಪಟ್ಟು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ನಮಗಿದೆ ಎಂದು ರಾಜನಾಥ್ ಸಿಂಗ್ ಆತ್ಮವಿಶ್ವಾಸದಿಂದ ನುಡಿದಿದ್ದಾರೆ.

