ಬದಿಯಡ್ಕ: ಬೇಕಲ ಗೋಕುಲಂ ಗೋಶಾಲೆಯಲ್ಲಿ ಪರಂಪರಾ ವಿದ್ಯಾಪೀಠದ ವತಿಯಿಂದ ಧೇನು ಮಂಟಪದಲ್ಲಿ ಆಯೋಜಿಸಲಾದ ವೈಶಾಖ ನಟನಂ 2026, ಭಕ್ತಿಮಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ, ನಾಟ್ಯಕಲಾರತ್ನ ಗುರು ಡಾ. ಗಾಯತ್ರಿ ಚಂದ್ರಶೇಖರ್ ಅವರ ಶಿಷ್ಯೆ ರಮ್ಯ ವರ್ಣ ಅವರ ಭರತನಾಟ್ಯ ಪ್ರದರ್ಶನ ಅತ್ಯಂತ ಮನಮೋಹಕವಾಗಿ ಮೂಡಿಬಂತು. `ಅಸೈಂತಾಡುಂ ಮಯಿಲ್' ಕೃತಿಯಲ್ಲಿ ಅವರು ನವಿಲಿನ ಸೌಂದರ್ಯ ಮತ್ತು ಲಾಸ್ಯವನ್ನು ಅಪೂರ್ವವಾಗಿ ಅಭಿವ್ಯಕ್ತಪಡಿಸಿದರು. ಮಳೆಯ ಹನಿಗಳ ನಡುವೆ ತನ್ನ ರೆಕ್ಕೆಗಳನ್ನು ಬಿಚ್ಚಿ ನೃತ್ಯಮಾಡುವ ನವಿಲಿನ ನಾಜೂಕಾದ ಚಲನೆಗಳು, ಅದರ ಸೊಗಸಾದ ನಡೆ ಹಾಗೂ ಲಯಬದ್ಧ ಹೆಜ್ಜೆಗಳು ಅವರ ನೃತ್ಯದಲ್ಲಿ ಜೀವಂತವಾಗಿ ಪ್ರತಿಫಲಿಸಿದವು.
ಅವರ ಪ್ರತಿಯೊಂದು ಮುದ್ರೆಯೂ ಕಾವ್ಯದ ಸಾಲಿನಂತೆ ಸೊಗಸಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಮಂತ್ರಮುಗ್ಧಗೊಳಿಸಿತು. `ಮಾಡು ಮೆಕ್ಕುಂ ಕಣ್ಣೇ' ಅಭಿನಯದಲ್ಲಿ ಬಾಲಕೃಷ್ಣನ ತುಂಟತನ, ಕುಚೋದ್ಯ ಮತ್ತು ಮುದ್ದಾದ ಬಾಲಲೀಲೆಗಳನ್ನು ಅವರು ಅತಿ ಸುಂದರವಾಗಿ ನಿರೂಪಿಸಿದರು. ಯಶೋದೆಯ ಮುಂದೆ ನಿರಪರಾಧಿಯಾಗಿ ನಿಂತ ಕೃಷ್ಣನ ಭಾವಭಂಗಿಗಳು ಅವರ ಮುಖಾಭಿನಯದಲ್ಲಿ ಸಹಜವಾಗಿ ಮೂಡಿಬಂದವು. `ಬಾಗಿಲನು ತೆರೆದು' ಕೃತಿಯಲ್ಲಿ ಗಜೇಂದ್ರ ಮೋಕ್ಷ, ನರಸಿಂಹ-ಪ್ರಹ್ಲಾದ ಮತ್ತು ದ್ರೌಪದಿ ರಕ್ಷಣೆಯ ಮೂರು ಪೌರಾಣಿಕ ಪ್ರಸಂಗಗಳನ್ನು ಅವರು ಭಾÁವಪೂರ್ಣವಾಗಿ ಪ್ರದರ್ಶಿಸಿದರು. ಸಂಕಟದಲ್ಲಿ ಸಿಲುಕಿದ ಗಜೇಂದ್ರನ ಆರ್ತನಾದ, ಪ್ರಹ್ಲಾದನ ಅಚಲ ಭಕ್ತಿ, ನರಸಿಂಹನ ಉಗ್ರ ಅವತಾರ ಹಾಗೂ ದ್ರೌಪದಿಯ ಸಂಪೂರ್ಣ ಶರಣಾಗತಿ ಈ ಎಲ್ಲ ಭಾವಗಳನ್ನು ಅವರು ಅತ್ಯಂತ ನಯವಾಗಿ ಮತ್ತು ಮನೋಜ್ಞವಾಗಿ ವ್ಯಕ್ತಪಡಿಸಿದರು. ಅವರ ನೃತ್ಯ ಕೇವಲ ಕಲಾಪ್ರದರ್ಶನವಾಗಿರದೆ, ಭಕ್ತಿ ಮತ್ತು ಭಾವಗಳ ದಿವ್ಯ ಸಂಗಮವಾಗಿ ಧೇನು ಮಂಟಪದ ವಾತಾವರಣವನ್ನು ಇನ್ನಷ್ಟು ಪಾವನಗೊಳಿಸಿತು.

.jpg)

