ನವದೆಹಲಿ: ಮಗುವಿನ ಜನನಕ್ಕೂ ಮುನ್ನ ಮತ್ತು ಅನಂತರ ತಾಯಿಯು ಖಿನ್ನತೆಗೆ ಹೋಗುವುದನ್ನು ತಡೆಯಲು ನಿಯಮಿತವಾಗಿ ಮಾನಸಿಕ ಆರೋಗ್ಯದ ತಪಾಸಣೆ ನಡೆಸುವ ಕೇರಳದ 'ಅಮ್ಮನ ಮನಸು' ಕಾರ್ಯಕ್ರಮವು ಇತರರಿಗೆ ಮಾದರಿಯಾಗಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಶ್ಲಾಘನೆ ವ್ಯಕ್ತಪಡಿಸಿದೆ.
ತಪಾಸಣೆ, ರೋಗ ನಿರ್ಣಯ ಮತ್ತು ನಿರಂತರ ಚಿಕಿತ್ಸೆಯ ಸೇವೆಗಳ ನಡುವಣ ಅಂತರವು ಮಹಿಳೆಯರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ ಎಂದು ಡಬ್ಲ್ಯುಇಎಫ್ ವರದಿಯು ತಿಳಿಸಿದೆ.
ಸರ್ಕಾರಿ ಅನುದಾನಿತ ವ್ಯವಸ್ಥೆ ಮೂಲಕ ತಾಯಿಯ ಆರೋಗ್ಯ ತಪಾಸಣೆಯ ಜೊತೆಜೊತೆಗೆ ಮಾನಸಿಕ ಆರೋಗ್ಯದ ತಪಾಸಣೆಯನ್ನು ಹೇಗೆ ನಡೆಸಬಹುದು ಎಂಬುದಕ್ಕೆ ಈ ಕಾರ್ಯಕ್ರಮವು ಪ್ರೇರಣೆಯಾಗಿದೆ ಎಂದು ವರದಿ ಹೇಳಿದೆ.

