ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪೂರ್ತಿಗೊಳ್ಳುತ್ತಿದ್ದಂತೆ ಕೇರಳದಲ್ಲಿ ಐಕ್ಯರಂಗ ಭರ್ಜರಿ ಗೆಲುವು ಕಂಡುಕೊಮಡಿದೆ. ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕರಲ್ಲಿಐಕ್ಯರಂಗ ಭರ್ಜರಿ ಗೆಲುವು ಸಾಧಿಸಿದೆ.
ಮಂಜೇಶ್ವರ ಮತ್ತು ಕಾಸರಗೋಡು ಮಾತ್ರ ತನ್ನ ತೆಕ್ಕೆಯಲ್ಲಿದ್ದ ಸ್ಥಾನಗಳಿಗೆ ಹೊರತಾಗಿ ಈ ಬಾರಿ ಉದುಮ ಮತ್ತು ತ್ರಿಕ್ಕರಿಪುರ ಕ್ಷೇತ್ರಗಳನ್ನು ಸಿಪಿಎಂನಿಂದ ಕಸಿದುಕೊಂಡಿದೆ. ಬಿಜೆಪಿ ಈ ಬಾರಿ ಹೆಚ್ಚಿನ ನಿರೀಕ್ಷೆಯನ್ನಿರಿಸಿಕೊಂಡಿದ್ದ ಮಂಜೇಶ್ವರ ಮತ್ತು ಕಾಸರಗೋಡು ಕ್ಷೇತ್ರಗಳಲ್ಲಿ ಪರಾಭವ ಅನುಭವಿಸಿದೆ. ಮಂಜೇಶ್ವರ ಕ್ಷೇತ್ರದಲ್ಲಿ ಎಡರಂಗದ ಕಳಪೆ ಸಾಧನೆ ಐಕ್ಯರಂಗಕ್ಕೆ ವರದಾನವಾಗಿ ಪರಿಣಮಿಸಿದೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮೂರು ಸದಸ್ಯರನ್ನು ಹೊಂದಿದ್ದ ಎಡರಂಗಕ್ಕೆ ಈಬಾರಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿದೆ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಐಕ್ಯರಂಗದ ಎಕೆಎಂ ಅಶ್ರಫ್ 29306 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಇದು ಮಂಜೇಶ್ವರ ಮಂಡಲದ ಐತಿಹಾಸಿಕ ಮತ್ತು ಚಾರಿತ್ರಿಕ ಅಂತರದ ಗೆಲುವಾಗಿದೆ. ಈ ಹಿಂದೆ ಕೇವಲ ಮತಗಳ ಅಂತರದಲ್ಲಿ ಗೆಲುವು ದಾಖಲಿಸುತ್ತಾ ಬಂದಿದ್ದ ಐಕ್ಯರಂಗ ಮಂಜೇಶ್ವರದಲ್ಲಿ ಪ್ರಬಲ ಪ್ರತಿಸ್ಪರ್ಧಿ ಬಿಜೆಪಿಯ ಕೆ. ಸುರೇಂದ್ರನ್ ಅವರನ್ನು 29ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಪರಾಜಯಗೊಳಿಸುವ ಮೂಲಕ ಎ.ಕೆ.ಎಂ ಅಶ್ರಫ್ ಅವರು ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಬಹುಮತ ಪಡೆದ ಸಾಧನೆ ಮಾಡಿದ್ದಾರೆ. ಎ.ಕೆ.ಎಂ ಅಶ್ರಫ್ 96470ಮತಗಳನ್ನು ಪಡೆದಿದ್ದರೆ, ಕೆ. ಸಉರೇಂದ್ರನ್ 67065ಮತಗಳನ್ನು ಪಡೆದುಕೊಮಡಿದ್ದಾರೆ.
ಕಾಸರಗೋಡು ಕ್ಷೇತ್ರದಲ್ಲಿ ಐಕ್ಯರಂಗದ ಅಬ್ಯರ್ಥಿ ಮಾಹಿನ್ ಹಾಜಿ ಕಲ್ಲಟ್ರ ಅವರು 75980ಮತಗಳನ್ನು ಪಡೆದುಕೊಂಡಿದ್ದು, ಸಮೀಪ ಸ್ಪರ್ಧಿ ಬಿಜೆಪಿಯ ಅಶ್ವಿನಿ ಎಂ.ಎಲ್ ಅವರು 53136ಮತಗಳನ್ನು ಪಡೆದುಕೊಂಡಿದ್ದಾರೆ.
ಇದೇ ಸಂದರ್ಭ ಸಿಪಿಎಂನ ಭದ್ರ ಕೋಟೆ ತ್ರಿಕರಿಪುರ ಕ್ಷೇತ್ರದಲ್ಲಿ, ಬಿಜೆಪಿಯಿಂದ ಕಾಂಗ್ರೆಸ್‍ಗೆ ಪಕ್ಷಾಂತರಗೊಂಡು ಸ್ಪರ್ಧಿಸಿದ್ದ ಸಂದೀಪ್ ವಾರ್ಯರ್ ಅಚ್ಚರಿಯ ಗೆಲುವು ಗಳಿಸಿದ್ದಾರೆ. ಇವರು ಸಿಪಿಎಂನ ಡಾ. ವಿ.ಪಿ.ಪಿ ಮುಸ್ತಫಾ ಅವರನ್ನು ಪರಾಭವಗೊಳಿಸಿದ್ದಾರೆ. ಇನ್ನು ಉದುಮ ಕ್ಷೇತ್ರದಲ್ಲಿ ಸಿಪಿಎಂನ ಸಿ.ಎಚ್ ಕುಞಂಬು ಅವರನ್ನು ಕಾಂಗ್ರೆಸ್‍ನ ಕೆ. ನೀಲಕಂಠನ್ ಪರಾಭವಗೊಳಿಸಿದ್ದಾರೆ. ಹೊಸದುರ್ಗದಲ್ಲಿ ಸಿಪಿಐನ ಗೋವಿಂದನ್ ಪಳ್ಳಿಕ್ಕಾಪಿಲ್ ಐಕ್ಯರಂಗದ ಶೈಜಿ ಒಟ್ಟಪಳ್ಳಿ ಅವರನ್ನು ಪರಾಭವಗೊಳಿಸುವ ಮೂಲಕ ಗೆಲುವು ಸಾಧಿಸಿದ್ದಾರೆ.

