ಇಂಫಾಲ: ಶಂಕಿತ ಕುಕಿ ಉಗ್ರರಿಂದ ಒತ್ತೆಯಾಳುಗಳಾಗಿದ್ದಾರೆ ಎನ್ನಲಾದ ಆರು ಮಂದಿ ನಾಗರಿಕರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮಣಿಪುರದ ರಾಜಧಾನಿ ಇಂಪಾಲದಲ್ಲಿ ಸೋಮವಾರ ನೂರಾರು ನಾಗಾ ಜನಾಂಗದ ಜನರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದರು.
'ನಾಗಾ ಪೀಪಲ್ಸ್ ಯೂನಿಯನ್ ಇಂಫಾಲ' ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಮೈತೇಯಿ ಸಮುದಾಯದ ಹಲವು ಸದಸ್ಯರು ಪಾಲ್ಗೊಂಡಿದ್ದರು.
ಇಂಫಾಲ ಪೂರ್ವ ಜಿಲ್ಲೆಯ ಟ್ರೈಬಲ್ ಮಾರ್ಕೆಟ್ ಪ್ರದೇಶದಿಂದ ಆರಂಭವಾದ ಈ ರ್ಯಾಲಿ ಮುಖ್ಯಮಂತ್ರಿ ಅವರ ಬಂಗಲೆವರೆಗೆ ಸಾಗಿತು.
ಸುಮಾರು 300 ಮೀಟರ್‌ನಷ್ಟು ದೂರ ರ್ಯಾಲಿ ನಡೆಸಿದ ಪ್ರತಿಭಟನಕಾರನ್ನು ಮುಖ್ಯಮಂತ್ರಿ ಅವರ ನಿವಾಸದಿಂದ ಸುಮಾರು 200 ಮೀಟರ್ ದೂರದಲ್ಲಿರುವ ಪ್ಯಾಲೇಸ್ ಗೇಟ್ ಬಳಿ ಸಮೀಪ ಭಾರಿ ಸಂಖ್ಯೆಯಲ್ಲಿದ್ದ ಭದ್ರತಾ ಸಿಬ್ಬಂದಿ ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಲು ಒಕ್ಕೂಟದ ನಿಯೋಗವೊಂದಕ್ಕೆ ಮಾತ್ರ ಮುಂದೆ ಹೋಗಲು ಅನುಮತಿ ನೀಡಲಾಯಿತು.
ಆರು ಮಂದಿ ನಾಗಾ ನಾಗರಿಕರ ಅಪಹರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಶಸ್ತ್ರ ಕುಕಿ ಸಮುದಾಯದ ಜನರ ಗುಂಪಿನ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಮನವಿ ಪತ್ರದಲ್ಲಿ ಒತ್ತಾಯಿಸಿದೆ.
ಅಲ್ಲದೆ, ಉಪ ಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಅವರ ಪತಿ 'ಕುಕಿ ನ್ಯಾಷನಲ್ ಫ್ರಂಟ್' (ಪ್ರೆಸಿಡೆನ್ಶಿಯಲ್) ಸಂಘಟನೆಯ ನೇತೃತ್ವ ವಹಿಸಿದ್ದು, ಅವರೇ ಅಪಹರಣಕ್ಕೆ ಕಾರಣ ಎಂದು ಆರೋಪಿಸಿರುವ ಸಂಘಟನೆ ಕಿಪ್ಲಿನ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿದೆ.

