ನಾಸಿಕ್: ಟಿಸಿಎಸ್‌ನ ನಾಸಿಕ್ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಎರಡನೇ ದೋಷಾರೋಪ ಪಟ್ಟಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದೆ.
ರಾಜಾ ರಫೀಕ್ ಮೆಮೋಮ್, ಆಶ್ವಿನಿ ಅಶೋಕ್ ಚೈನನಿ, ಶಾಫಿ ಬಿಕನ್ ಶೇಕ್, ನಿದಾ ಖಾನ್, ತೌಸಿಫ್ ಬಿಲಾಲ್ ಅತ್ತರ್, ಡ್ಯಾನಿಶ್ ಇಜಾಜ್ ಶೇಖ್, ಶಾರುಕ್ ಹುಸೇನ್ ಶೌಕತ್ ಖುರೇಶಿ ಮತ್ತಿತರರ ವಿರುದ್ಧ ದಾಖಲಾಗಿರುವ ಎಂಟು ಪ್ರಕರಣಗಳ ಬಗ್ಗೆ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಯೊಲಲಿ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೇ 22ರಂದು 1500 ಪುಟಗಳ ದೋಷಾರೋಪ ಪಟ್ಟಿಯನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ಕಂಪನಿಯಲ್ಲಿ ಬೇರೆ ನೌಕರರಿಂದ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಮತ್ತು ಬಲವಂತದ ಮತಾಂತರ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಹಲವು ಮಹಿಳಾ ಉದ್ಯೋಗಿಗಳು ದೂರು ನೀಡಿದ್ದರು. ಈ ದೂರುಗಳ ತನಿಖೆಗೆ ಎಸ್‌ಐಟಿ ರಚಿಸಲಾಗಿತ್ತು.

