ನವದೆಹಲಿ (PTI): ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಪ್ರಕಟಿಸಿದ್ದ ಪಠ್ಯಪುಸ್ತಕದಲ್ಲಿನ ನ್ಯಾಯಾಂಗದ ಅಧ್ಯಾಯಕ್ಕೆ ಸಂಬಂಧಿಸಿದಂತೆ ಮೂವರು ತಜ್ಞರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿದ್ದ ಮಾರ್ಚ್ 11ರಂದು ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ಮಾರ್ಪಡಿಸಿದೆ.
'ರಾಜ್ಯ, ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾಲಯಗಳು, ರಾಜ್ಯ, ಕೇಂದ್ರ ಸರ್ಕಾರದ ಅನುದಾನಿತ ಸಂಸ್ಥೆಗಳು ಮಾರ್ಚ್ 11ರಂದು ನೀಡಿದ ಆದೇಶದಿಂದ ಪ್ರಭಾವಿತವಾಗದೇ, ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು' ಎಂದು ತಿಳಿಸಿದೆ.
ಎನ್‌ಸಿಇಆರ್‌ಟಿ ಪ್ರಕಟಿಸಿದ್ದ 8ನೇ ತರಗತಿಯ ಪಠ್ಯಪುಸ್ತಕದಲ್ಲಿನ ನ್ಯಾಯಾಂಗ ವಿಷಯಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಅದರಲ್ಲಿನ ವಿಷಯಗಳು ನ್ಯಾಯಾಂಗದ ಘನತೆಯನ್ನು ಕುಗ್ಗಿಸುವಂತಿವೆ ಎಂಬುದಾಗಿ ಹೇಳಿತ್ತು. ಈ ಸಂಬಂಧ ಕ್ಷಮೆ ಕೋರಿದ್ದ ಎನ್‌ಸಿಇಆರ್‌ಟಿ ಈ ಪುಸ್ತಕಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಂಡಿತ್ತು.
ಈ ಪಠ್ಯ ರಚನೆಯಲ್ಲಿ ಮತ್ತು ಅದನ್ನು ಅಂತಿಮಗೊಳಿಸುವಲ್ಲಿ ತೊಡಗಿದ್ದ ತಜ್ಞರಾದ ಪ್ರೊ. ಮೈಕೆಲ್ ಡ್ಯಾನಿನೊ, ಸುಪರ್ಣ ದಿವಾಕರ್ ಮತ್ತು ಅಲೋಕ್ ಪ್ರಸನ್ನ ಕುಮಾರ್ ಅವರನ್ನು ಭಾರತದಲ್ಲಿ ಯಾವುದೇ ಪಠ್ಯ ಪುಸ್ತಕ ರಚನಾ ಕಾರ್ಯಗಳಿಗೆ ನಿಯೋಜಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು.
ನಾವು ಮೂರು ಮಂದಿಯಷ್ಟೇ ಪಠ್ಯ ರಚಿಸಿಲ್ಲ, ಇದು ಸಾಮೂಹಿಕ ಪ್ರಕ್ರಿಯೆಯಾಗಿತ್ತು. ಹೀಗಾಗಿ, ತಮ್ಮ ವಿರುದ್ಧ ಮಾಡಿರುವ ನಿರ್ಬಂಧಗಳನ್ನು ಮರು ಪರಿಶೀಲಿಸುವಂತೆ ಮೂವರು ಸುಪ್ರೀಂಗೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ, ನ್ಯಾಯಮೂರ್ತಿ ವಿಫುಲ್ ಎಂ.ಪಂಚೋಲಿ ಅವರ ನ್ಯಾಯಪೀಠ, ಮೂವರು ನೀಡಿದ ವಿವರಣೆಯಿಂದ ತೃಪ್ತಿಗೊಂಡಿದ್ದೇವೆ. ಈ ಕುರಿತು ಶಿಕ್ಷಣ ಸಂಸ್ಥೆಗಳು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.

