ನವದೆಹಲಿ: ಭಾರತದಲ್ಲಿರುವ ಸುಮಾರು 3,000 ಶಂಕಿತ ಅಕ್ರಮ ಬಾಂಗ್ಲಾದೇಶಿ ವಲಸಿಗರ ರಾಷ್ಟ್ರೀಯತೆ ಪರಿಶೀಲನೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಭಾರತವು ಗುರುವಾರ ಬಾಂಗ್ಲಾದೇಶವನ್ನು ಆಗ್ರಹಿಸಿದೆ.
ಭಾರತವು ಅಕ್ರಮ ವಲಸಿಗರನ್ನು ಬಲವಂತವಾಗಿ ಗಡಿಯಾಚೆಗೆ ಕಳುಹಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬಾಂಗ್ಲಾದೇಶ ಎಚ್ಚರಿಕೆ ನೀಡಿದ ಬೆನ್ನಲ್ಲೇ ಭಾರತದ ಈ ಹೇಳಿಕೆ ಹೊರಬಿದ್ದಿದೆ.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಖಲೀಲುರ್ ರಹಮಾನ್ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿ, "ಭಾರತ ಅಕ್ರಮ ವಲಸಿಗರನ್ನು ಬಲವಂತವಾಗಿ ಗಡಿಯಾಚೆಗೆ ಕಳುಹಿಸಿದರೆ, ಬಾಂಗ್ಲಾದೇಶ ಸೂಕ್ತ ಕ್ರಮ ಕೈಗೊಳ್ಳಲಿದೆ" ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, "ಈ ವಿಷಯವನ್ನು ಭಾರತದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡೀಪಾರು ಮಾಡುವ ವಿಶಾಲ ನೆಲೆಯಲ್ಲಿ ನೋಡಬೇಕಿದೆ. ಈ ಪ್ರಕ್ರಿಯೆಗೆ ಬಾಂಗ್ಲಾದೇಶದ ಸಹಕಾರ ಅಗತ್ಯ" ಎಂದು ತಿಳಿಸಿದ್ದಾರೆ.
ರಾಷ್ಟ್ರೀಯತೆ ಪರಿಶೀಲನೆಗೆ ಸಂಬಂಧಿಸಿದ 2,862 ಪ್ರಕರಣಗಳು ಸದ್ಯ ಬಾಂಗ್ಲಾದೇಶದ ಬಳಿ ಬಾಕಿ ಉಳಿದಿವೆ. ಕೆಲವು ಅರ್ಜಿಗಳು ಐದು ವರ್ಷಕ್ಕೂ ಹೆಚ್ಚು ಅವಧಿಯಿಂದ ವಿಲೇವಾರಿಯಾಗದೆ ಉಳಿದಿವೆ ಎಂದು ಅವರು ಹೇಳಿದ್ದಾರೆ.
"ಭಾರತದ ಕಾನೂನುಗಳು, ನಿಯಮಗಳು ಹಾಗೂ ಉಭಯ ದೇಶಗಳ ನಡುವಿನ ಸ್ಥಾಪಿತ ವ್ಯವಸ್ಥೆಗಳ ಅನ್ವಯ ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ಗಡೀಪಾರು ಮಾಡುವುದು ನಮ್ಮ ನೀತಿಯಾಗಿದೆ" ಎಂದು ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.
"ಬಾಕಿ ಇರುವ ಪ್ರಕರಣಗಳ ರಾಷ್ಟ್ರೀಯತೆ ಪರಿಶೀಲನೆಯನ್ನು ಬಾಂಗ್ಲಾದೇಶ ತ್ವರಿತಗೊಳಿಸಬೇಕು. ಇದರಿಂದ ಅಕ್ರಮ ವಲಸಿಗರ ಗಡೀಪಾರು ಪ್ರಕ್ರಿಯೆ ಸುಗಮವಾಗಿ ನಡೆಯಲಿದೆ" ಎಂದು ಅವರು ತಿಳಿಸಿದ್ದಾರೆ.

