ಒಟ್ಟಾವ: ಖಾಲಿಸ್ತಾನಿ ಉಗ್ರರು ದೇಶದಲ್ಲಿ ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಅವರು 'ರಾಷ್ಟ್ರೀಯ ಭದ್ರತೆಗೆ ಬೆದರಿಕೆ'ಯಾಗಿದ್ದಾರೆ ಎಂದು ಕೆನಡಾದ ಗುಪ್ತಚರ ಸಂಸ್ಥೆಯು ಘೋಷಿಸಿದೆ.
ಕೆನಡಾ ಮೂಲದ ಖಾಲಿಸ್ತಾನಿ ಉಗ್ರರು(ಸಿಬಿಕೆಇ) ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ತೊಂದರೆಯುಂಟು ಮಾಡುವ ಸಾಧ್ಯತೆಯಿದೆ ಎಂದು ಕೆನಡಾದ ಗುಪ್ತಚರ ಸಂಸ್ಥೆಯು 2025ರ ಸಾರ್ವಜನಿಕ ವರದಿಯಲ್ಲಿ ತಿಳಿಸಿದೆ.
ಈ ವರದಿಯು ಕೆನಡಾ ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.
ಕೆಲವು ಖಾಲಿಸ್ತಾನಿ ಉಗ್ರರು ಅನುಮಾನಾಸ್ಪದ ಸಮುದಾಯದ ಸದಸ್ಯರಿಂದ ಹಣವನ್ನು ಸಂಗ್ರಹಿಸುತ್ತಿದ್ದಾರೆ ಹಾಗೂ ಅವರನ್ನು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೋತ್ಸಾಹಿಸುತ್ತಿದ್ದಾರೆ ಎನ್ನುವ ಅಂಶವು ವರದಿಯಲ್ಲಿದೆ.
ಪ್ರತ್ಯೇಕ ಖಾಲಿಸ್ತಾನ ದೇಶಕ್ಕಾಗಿ ಶಾಂತಿಯುತವಾಗಿ ಹೋರಾಟ ಮಾಡುವವರನ್ನು ಉಗ್ರಗಾಮಿಗಳು ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಭಾರತದಲ್ಲಿ ಹಿಂಸಾಚಾರವನ್ನು ಉತ್ತೇಜಿಸಲು, ನಿಧಿಸಂಗ್ರಹಿಸಲು ಕೆನಡಾವನ್ನು ನೆಲೆಯಾಗಿ ಬಳಸುವ ಗುಂಪನ್ನು ಮಾತ್ರ ಖಾಲಿಸ್ತಾನಿ ಉಗ್ರಗಾಮಿಗಳು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.
ಕೆನಡಾದಲ್ಲಿ ಜರುಗಿದ್ದ ಏರ್ ಇಂಡಿಯಾ-182 ವಿಮಾನ ಅಪಘಾತವಾದ 40ನೇ ವರ್ಷದ ಸಂದರ್ಭದಲ್ಲಿ ಈ ವರದಿ ಪ್ರಕಟವಾಗಿದೆ. ಆ ಅಪಘಾತವು ಖಾಲಿಸ್ತಾನಿ ಉಗ್ರ ಚಟುವಟಿಕೆ ಎಂದು ಶಂಕಿಸಲಾಗಿತ್ತು. ಅದರಲ್ಲಿ 329 ಜನರು ಮೃತಪಟ್ಟಿದ್ದರು. ಕೆನಡಾದಲ್ಲಿ ಜರುಗಿದೆ ಅತಿದೊಡ್ಡ ಭಯೋತ್ಪಾದಕ ಕೃತ್ಯಗಳಲ್ಲಿ ಇದು ಒಂದಾಗಿದೆ.
ಖಾಲಿಸ್ತಾನಿ ಉಗ್ರರು ಭಾರತದಿಂದ ಪ್ರತ್ಯೇಕ ಸಿಖ್ ದೇಶದ ರಚನೆಗೆ ಒತ್ತಾಯ ಮಾಡುತ್ತಾ ಬಂದಿದ್ದು, ಭಾರತ ಸರ್ಕಾರವು ಅವರನ್ನು ಉಗ್ರಗಾಮಿಗಳು ಎಂದು ಘೋಷಿಸಿದೆ.

