ಕುಂಬಳೆ: ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕಾಲಾಕಾಲಕ್ಕೆ ಅಗತ್ಯದ ಅನುದಾನಗಳನ್ನು ರಾಜ್ಯದೊಳಗಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ನೀಡಿ ಬೆಂಬಲಿಸುತ್ತಿದೆ ಎಂದು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಪೈವಳಿಕೆ ಚೇವಾರು ಸಮೀಪದ ಕುಡಾಲುಮೇರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶನಿವಾರ ನಡೆದ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ, ದತ್ತಿನಿಧಿ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.
ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಪ್ರಮುಖ ಅಂಗವಾಗಿದ್ದು, ಜನರು ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಜೋಡಿಸುವ ಕೈಂಕರ್ಯದಲ್ಲಿ ನಿರತರಾಗಿರುವ ಪತ್ರಕರ್ತರ ಬಹುಮುಖದ ಪ್ರಯತ್ನಗಳು ಗಡಿನಾಡು ಕಾಸರಗೋಡಲ್ಲಿ ಶ್ಲಾಘನೀಯವಾದುದು. ಕನ್ನಡ ಭಾಷೆ, ಸಂಸ್ಕøತಿ, ಶಿಕ್ಷಣ ಸಹಿತ ವಿವಿಧ ವಲಯಗಳಲ್ಲಿ ಪತ್ರಕರ್ತರ ಮಧ್ಯಸ್ಥಿಕೆಗಳು ಪರಿಣಾಮಕಾರಿಯಾಗಿ ಹೊರಹೊಮ್ಮಿದೆ. ಸವಾಲುಗಳ ನಡುವೆಯೂ ಗಡಿನಾಡಿನ ಕನ್ನಡ ಪತ್ರಕರ್ತರು ಸಂಘಟಿತರಾಗಿ ನಡೆಸುತ್ತಿರುವ ಚಟುವಟಿಕೆಗಳು ಇತರೆಡೆಗಳಿಗೆ ಮಾದರಿಯಾದುದು ಎಂದರು.
ವ್ಯಕ್ತಿಯನ್ನು ಶಕ್ತಿಯಾಗಿ ಬೆಳೆಸುವುದು ಶಿಕ್ಷಣ. ಸ್ವಾತಂತ್ರ್ಯಾನಂತರದ ಹಂತಾನುಹಂತದ ಚಿಂತನೆಗಳ ಫಲವಾಗಿ ಇಂದು ಬಹುಸಂಖ್ಯೆಯ ಜನ ಶಿಕ್ಷಿತರಾಗಿದ್ದಾರೆ. ಈ ವ್ಯವಸ್ಥೆ ಸುಶಿಕ್ಷಿತ ಸಾಮಾಜಿಕ ವ್ಯವಸ್ಥೆ ರೂಪುಗೊಂಡು ಸಜ್ಜನ ಸಮುದಾಯಗಳು, ರಾಜ್ಯ, ದೇಶದ ಮಟ್ಟಿನ ವರೆಗೂ ಬೆಳೆದುನಿಂತಿರುವುದು ಭವಿಷ್ಯದ ಸಂತೃಪ್ತ ಪೀಳಿಗೆಗೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಅಂತಹ ವ್ಯವಸ್ಥೆ ತಯಾರುಗೊಳ್ಳಶಿಕ್ಷಣ ವ್ಯವಸ್ಥೆಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದರು.
ಕಾಸರಗೋಡು ಬ್ಲಾ.ಪಂ.ಸದಸ್ಯ ಸೋಮಶೇಖರ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದ ಸಮಾರಂಭ್ಲಿ ಕರ್ನಾಟಕ ಕನಿಷ್ಠ ವೇತನ ಆಯೋಗದ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮಂಜೇಶ್ವರ ಬ್ಲಾ.ಪಂ.ಅಧ್ಯಕ್ಷ ಸೈಫುಲಾ ತಂಙಳ್, ಕಲ್ಕೂರ ಪ್ರತಿಷ್ಠಾನದ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ಪೈವಳಿಕೆ ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀನಿವಾಸ ಮಾಸ್ತರ್ ಕೆ.ಎಚ್., ಸದಸ್ಯೆ ಶಶಿಕಲಾ ರೈ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅರಿಬೈಲು ಗೋಪಾಲ ಶೆಟ್ಟಿ, ಪುಷ್ಪರಾಜ್ ಬಿ.ಎಸ್., ಶ್ರೀನಿವಾಸ ನಾಯಕ್ ಇಂದಾಜೆ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಿವಾನಂದ ಕೋಟ್ಯಾನ್, ಶಿವ ರೆಡ್ಡಿ ಖ್ಯಾಡೆದ್, ಎನ್.ಚನಿಯಪ್ಪ ನಾಯ್ಕ, ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಂಘಟಕ ಎ.ಆರ್.ಸುಬ್ಬಯ್ಯಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭ ಪ್ರಮುಖ ಸಾಧಕರಾದ ಗೋನಾಸ್ವಾಮಿ ಬೆಂಗಳೂರು, ಸಂದೀಪ್ ಪುರಂದರ ಶೆಟ್ಟಿ, ಬಿ.ಎ. ಖಾದರ್ ಹಾಜಿ, ಡಾ. ಶಶಿಧರ ಎಚ್. ದೊಡ್ಡಮನಿ, ಝಹೀಂ ಕುಬಣೂರು, ಮೊಹಮ್ಮದ್ ಝಯಾನ್ ಇಸ್ಮಾಯಿಲ್ ಪಿ. ಇವರನ್ನು ದೀಪಕ್ ವಿ.ಕೆ. ಸನ್ಮಾನಿಸಿದರು.
ಮಾಧ್ಯಮ ಕ್ಷೇತ್ರದ ಸಾಧಕರಾದ ಬಿ.ಎಂ. ಹನೀಫ್, ಕುರಿಯ ವಾಸುದೇವ ಎಂ. ಹೊಳ್ಳ, ಡಾ. ಯು.ಎಂ. ರವಿ, ಪುಂಡಲೀಕ ಭೀಮಪ್ಪ ಬಾಲೋಜಿ, ವಿಜಯಲಕ್ಷ್ಮಿ ಶಿಬರೂರು, ಎಚ್.ಇ. ರವಿ ಸೋಮವಾರ ಪೇಟೆ, ವಿಶ್ವನಾಥ್ ಬೆಳಗಲ್ ಮಠ ಕೊಪ್ಪಳ, ಪ್ರಕಾಶ್ ಸುವರ್ಣ ಕಟಪಾಡಿ, ದೇವೇಂದ್ರಪ್ಪ ಆವಂಟಿ ಗುಲ್ಬರ್ಗ, ಸತೀಶ್ ಇರಾ, ಸುಭಾಷ್ ಸಿರಿಯ, ಹರೀಶ್ ಮಾಂಬಾಡಿ, ನವೀನ್ ಡಿಸೋಜ ಕೊಡಗು, ಶಂಸುದ್ದೀನ್ ಎಣ್ಮೂರು, ಎ.ಆರ್. ಚಿದಂಬರ ಕೊರಟಗೆರೆ ತುಮಕೂರು, ಕೆ.ಆರ್. ಮಂಜುನಾಥ ಹಾಸನ, ತೆಕ್ಕೇಕರೆ ಶಂಕರನಾರಾಯಣ ಭಟ್, ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡ್ ಇವರಿಗೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗಂಗಾಧರ ತೆಕ್ಕೆಮೂಲೆ ವಂದಿಸಿದರು. ಸೌಮ್ಯ ಗೌಡ ಬೆಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ 9ಕ್ಕೆ ಶೋಭಾಯಾತ್ರೆಗೆ ಜಿಟಿಗುಟ್ಟುವ ಮಳೆಯ ನಡುವೆ ಪೈವಳಿಕೆ ಪಂ. ಅಧ್ಯಕ್ಷೆ ಬದರುನ್ನೀಸ ಸಲೀಂ, ಸೀತಾರಾಮ ಶೆಟ್ಟಿ ಭಂಡಾರಗುತ್ತು ಚಾಲನೆ ನೀಡಿದರು.
ಬಳಿಕ ಸುಗಮ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಗದೀಶ ಮತ್ತು ತಂಡದವರಿಂದ ಪೂಜಾಕುಣಿತ, ಮಮತಾ ಮತ್ತು ತಂಡದವರಿಂದ ಸಮೂಹ ಜಾನಪದ ನೃತ್ಯ, ಗಂಗಾ ಯಶಸ್ವಿನಿ ಮತ್ತು ತಂಡದವರಿಂದ ಸಮೂಹ ಶಾಸ್ತ್ರೀಯ ನೃತ್ಯ, ಮಾರುತಿ ಮತ್ತು ತಂಡದವರಿಂದ ಜಾನಪದ ಕಂಸಾಳೆ ನೃತ್ಯ, ಮರಿಸ್ವಾಮಿ ಮತ್ತು ತಂಡದವರಿಂದ ಕಹಳೆ ವಾದನ, ಜಲಶ್ರೀ ಮತ್ತು ತಂಡದವರಿಂದ ಸಮೂಹ ಭರತನಾಟ್ಯ, ರಂಗನಾಥ ಮಹಿಳಾ ಮತ್ತು ಮಕ್ಕಳ ಸಂಮೃದ್ಧಿ ಸಂಘದವರಿಂದ ನಾಟ್ಯ ವೈಭವ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕ್ಕಳಿ ಟ್ರಸ್ಟ್‍ನವರಿಂದ ಚೆಂಡೆ ಮೇಳ, ವಿದುಷಿ ಲತಾ ಶಶಿಧರನ್ ಶಿಷ್ಯರಿಂದ ನೃತ್ಯಂ, ಪರಯಂಗಾನಂ ದಫ್ ಸಂಘದಿಂದ ದಫ್‍ಮುಟ್, ಚಿಲಂಬು ಕೊಡವಳದವರಿಂದ ಅಲಾಮಿ ನೃತ್ಯ, ಮಹಾಲಕ್ಷ್ಮಿಪುರಂ ವನಿತಾ ಕೋಲ್ಕಳಿ ಸಂಘದವರಿಂದ ಕೋಲ್ಕಳಿ ನಡೆಯಿತು.

.jpg)
.jpg)
.jpg)
.jpg)
