ಕೋಲ್ಕತ: ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳವನ್ನು ಆಳಿದ ಸಿಎಂ ಮಮತಾ ಬ್ಯಾನರ್ಜಿ, ತಮ್ಮ ಸಿಎಂ ಕುರ್ಚಿಯನ್ನು ಬಿಟ್ಟುಕೊಡುವ ಸಮಯ ಕಡೆಗೂ ಬಂದಾಯಿತು. ಬಂಗಾಳದಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಐತಿಹಾಸಿಕ ಗೆಲುವು ಸಾಧಿಸಿದೆ.
ದಶಕಗಳ ಕಾಲ ಕಮ್ಯುನಿಸ್ಟರು ಮತ್ತು ಬಳಿಕ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಪಶ್ಚಿಮ ಬಂಗಾಳವನ್ನು ಕಡೆಗೂ ವಶಪಡಿಸಿಕೊಳ್ಳುವ ಮೂಲಕ ಬಿಜೆಪಿ ತನ್ನ ಬಹುದಿನಗಳ ಮಾತನ್ನು ಸಾಬೀತುಪಡಿಸಿದೆ. ಮಮತಾ ನೇತೃತ್ವದ ಟಿಎಂಸಿ ಸಪ್ಪೆ ಮುಖ ಹಾಕಿಕೊಂಡು ಕೂತಿರುವಾಗ, ಈಗ ದೇಶದ ಜನತೆಯ ಕಣ್ಣು ಮುಂದಿನ ಮುಖ್ಯಮಂತ್ರಿ ಪಟ್ಟ ಯಾರಿಗೆ? ಎಂಬುದರ ಮೇಲಿದೆ.
ಸ್ಥಳೀಯ ನಾಯಕನಿಗೆ ಪಟ್ಟ
ಚುನಾವಣಾ ಪ್ರಚಾರದ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಂದು ಪ್ರಮುಖ ಘೋಷಣೆ ಹೊರಡಿಸಿದ್ದರು. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಂಗಾಳಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವ ಸ್ಥಳೀಯ ಬಂಗಾಳಿ ನಾಯಕರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಈಗ ಇದು ಚರ್ಚೆಗೆ ಬಂದಿದೆ.
ಮುಖ್ಯಮಂತ್ರಿ ರೇಸ್‌ನಲ್ಲಿ ಮಹಿಳಾ ಮಣಿಗಳು
ಈ ಚುನಾವಣೆಯಲ್ಲಿ ಬಿಜೆಪಿ ಮಹಿಳಾ ಸುರಕ್ಷತೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿದೆ. ಈ ಸಂದರ್ಭದಲ್ಲಿ, ಮಹಿಳಾ ನಾಯಕಿಯನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ನೇಮಿಸುವ ಮೂಲಕ ತನ್ನ ಮಹಿಳಾ ಪರ ಇಮೇಜ್ ಅನ್ನು ಮತ್ತಷ್ಟು ಬಲಪಡಿಸಲು ಆಶಿಸಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ.
ಯಾರು ಆ ನಾಲ್ವರು?
ಅಗ್ನಿಮಿತ್ರ ಪಾಲ್: ಫ್ಯಾಷನ್ ಡಿಸೈನರ್ ಆಗಿದ್ದ ಅಗ್ನಿಮಿತ್ರ, ಅಲ್ಲಿಂದ ನೇರವಾಗಿ ರಾಜಕಾರಣಿಯಾಗಿ ಬದಲಾಗಿ ಅಸನ್ಸೋಲ್ ದಕ್ಷಿಣದಿಂದ ಶಾಸಕಿ ಸ್ಥಾನವನ್ನು ಗೆದ್ದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿ ಅವರ ಅನುಭವ ಮತ್ತು ಮಮತಾ ಬ್ಯಾನರ್ಜಿ ವಿರುದ್ಧ ಕಟುವಾದ ಟೀಕೆ ಅವರನ್ನು ಸಿಎಂ ರೇಸ್‌ನಲ್ಲಿ ಮುಂದಿಟ್ಟಿರುವುದು ಗಮನಾರ್ಹ.
ರೂಪಾ ಗಂಗೂಲಿ
'ಮಹಾಭಾರತ' ಧಾರಾವಾಹಿಯಲ್ಲಿ ದ್ರೌಪದಿ ಪಾತ್ರದಿಂದ ಜನರ ಮನೆಮಾತಾದ ರೂಪಾ ಗಂಗೂಲಿ, ನಗರ ಮತದಾರರಲ್ಲಿಯೂ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಮಾಜಿ ರಾಜ್ಯಸಭಾ ಸದಸ್ಯೆ ಮತ್ತು ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದ ಇವರು, ಸೋನಾರ್ಪುರ್ ದಕ್ಷಿಣ ಕ್ಷೇತ್ರದಿಂದ ಗೆಲ್ಲುವ ಮೂಲಕ ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಸುವೇಂದು ಅಧಿಕಾರಿ
ಸುವೇಂದು ಅವರು ಬಿಜೆಪಿಗೂ ಬರುವ ಮೊದಲು ಮಮತಾ ಬ್ಯಾನರ್ಜಿ ಅವರ ನಿಕಟವರ್ತಿಯಾಗಿದ್ದರು. ನಂತರ ಅಲ್ಲಿಂದ ಹೊರಬಂದು, ಬಿಜೆಪಿ ಪರ ಅಖಾಡಕ್ಕಿಳಿದರು. ಮಮತಾ ವಿರುದ್ಧ ಸಾಲು ಸಾಲು ಆರೋಪ ಹೊರಿಸುತ್ತಿದ್ದ ಸುವೇಂದು, ಒಂದಷ್ಟು ತಮ್ಮ ಲೋಪದೋಷದಿಂದ ಟೀಕೆಗಳಿಗೂ ಗುರಿಯಾಗಿದ್ದಾರೆ. ಇದು ಅವರಿಗೆ ಸಿಎಂ ಸ್ಥಾನದಿಂದ ದೂರವಿಡಬಹುದು.
ದಿಲೀಪ್ ಘೋಷ್
ದಿಲೀಪ್ ಘೋಷ್ ಅವರು ಬಂಗಾಳದಲ್ಲಿ ಬಿಜೆಪಿ ಬೇರೂರಲು ಸಹಾಯ ಮಾಡಿದ ನಾಯಕರಲ್ಲಿ ಪ್ರಮುಖರು. ಅವರು ಆರ್‌ಎಸ್‌ಎಸ್ ಹಿನ್ನೆಲೆಯನ್ನು ಹೊಂದಿದ್ದು, ತಮ್ಮ ಆಕ್ರಮಣಕಾರಿ ಸ್ವಭಾವವು ಪಕ್ಷದ ಕಾರ್ಯಕರ್ತರಲ್ಲಿ ಉತ್ತಮ ಉತ್ಸಾಹವನ್ನು ತುಂಬುವಲ್ಲಿ ಸಹಕಾರಿಯಾಗಿದೆ. ಆದಾಗ್ಯೂ, ಕೆಲವೊಮ್ಮೆ ಅವರ ವಿವಾದಾತ್ಮಕ ಹೇಳಿಕೆಗಳು ಪಕ್ಷವನ್ನು ಸಂಕಷ್ಟಕ್ಕೆ ಸಿಲುಕಿಸಿರುವುದೂ ಇದೆ.

