ನವದೆಹಲಿ: 'ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಪ್ರಧಾನಿ ಅವರು ಮೌನ ತಾಳಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಯಾಕೆ ವಜಾಗೊಳಿಸಿಲ್ಲ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾನುವಾರ 'ಎಕ್ಸ್' ಮೂಲಕ ಪ್ರಶ್ನಿಸಿದ್ದಾರೆ.
'2024ರಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆ ರದ್ದಾಗಲಿಲ್ಲ. ಸಚಿವರು ರಾಜೀನಾಮೆ ನೀಡಲಿಲ್ಲ. ಸಿಬಿಐ ತನಿಖೆ ನಡೆಸಿತು. ಸಮಿತಿಯೊಂದನ್ನು ರಚಿಸಲಾಯಿತು. 2026ರಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಯಿತು. ಪರೀಕ್ಷೆ ರದ್ದಾಯಿತು, ಸಚಿವರು ರಾಜೀನಾಮೆ ನೀಡಲಿಲ್ಲ. ಸಿಬಿಐ ಮತ್ತೆ ತನಿಖೆ ನಡೆಸುತ್ತಿದೆ. ಮತ್ತೊಂದು ಸಮಿತಿ ರಚನೆಯಾಗಲಿದೆ. ಮೋದಿ ಅವರೇ, ದೇಶವೂ ನಿಮಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದೆ, ಉತ್ತರಿಸಿ!' ಎಂದು ರಾಹುಲ್ ಕೇಳಿದ್ದಾರೆ.
'ಪದೇ ಪದೇ ಪ್ರಶ್ನೆಪತ್ರಿಕೆ ಸೋರಿಕೆ ಯಾಕೆ ಆಗುತ್ತಿದೆ? ಈ ಚರ್ಚೆಯಲ್ಲಿ ನೀವು ಮತ್ತೆ ಮೌನವಾಗಿರುವುದೇಕೆ ? ಪ್ರತಿಬಾರಿ ವಿಫಲರಾಗುತ್ತಿರುವ ಶಿಕ್ಷಣ ಸಚಿವರನ್ನು ಯಾಕೆ ವಜಾಗೊಳಿಸುತ್ತಿಲ್ಲ' ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಮೇ 3ರಂದು ನಡೆದ ನೀಟ್-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆ ರದ್ದಾದ ಬಳಿಕ ಪ್ರಧಾನ್ ಅವರನ್ನು ವಜಾಗೊಳಿಸುವಂತೆ ರಾಹುಲ್ ಗಾಂಧಿ ಅವರು ಆಗ್ರಹಿಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಲ್ಲಿವರೆಗೆ ಒಂಬತ್ತು ಜನರನ್ನು ಬಂಧಿಸಿದೆ.

