ತಿರುವನಂತಪುರ: ಹಿರಿಯ ಶಾಸಕ ಜಿ. ಸುಧಾಕರನ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲು ಸಂಪುಟ ಶಿಫಾರಸು ಮಾಡಿದೆ. ಶಾಸಕರ ಪ್ರಮಾಣವಚನ ಮತ್ತು ಸ್ಪೀಕರ್ ಆಯ್ಕೆಗಾಗಿ ವಿಧಾನಸಭೆ ಅಧಿವೇಶನ ಕರೆಯುವಂತೆ ರಾಜ್ಯಪಾಲರನ್ನು ಕೋರಲು ಸಂಪುಟ ಸಭೆ ನಿರ್ಧರಿಸಿತು ಎಂದು ಮುಖ್ಯಮಂತ್ರಿ ವಿ.ಡಿ.ಸತೀಶನ್ ತಿಳಿಸಿದರು.
ಇದೇ 21ರಂದು ಶಾಸಕರ ಪ್ರಮಾಣವಚನ ಮತ್ತು ಇದೇ 22ರಂದು ಸ್ಪೀಕರ್ ಆಯ್ಕೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಮರು ತನಿಖೆಗೆ ಎಸ್‌ಐಟಿ ರಚನೆ:
ಆಲಪ್ಪುಳದಲ್ಲಿ 2023ರಲ್ಲಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ನಡೆದ ಪ್ರತಿಭಟನೆ ವೇಳೆ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣದ ಮರು ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ಸಂಪುಟ ಅನುಮೋದನೆ ನೀಡಿದೆ.
ಈ ಪ್ರಕರಣದ ಮರು ತನಿಖೆಗೆ ಆಲಪ್ಪುಳ ಜಿಲ್ಲಾ ನ್ಯಾಯಾಲಯ 2024ರ ನವೆಂಬರ್ 8ರಂದು ಆದೇಶಿಸಿತ್ತು. ಆದರೆ ಹಿಂದಿನ ಸರ್ಕಾರ ಈ ಕುರಿತು ನಿರ್ಲಕ್ಷ್ಯ ತೋರಿತ್ತು ಎಂದು ಸಿ.ಎಂ ದೂರಿದರು.
ರಾಜಕೀಯ ದ್ವೇಷದ ಆರೋಪಗಳನ್ನು ತಿರಸ್ಕರಿಸಿದ ಅವರು, 'ಸರ್ಕಾರ ನ್ಯಾಯಾಲಯದ ನಿರ್ದೇಶನವನ್ನು ಪಾಲಿಸುತ್ತಿದೆ. ಆದರೆ, ಹಿಂದೆ ನಡೆದದ್ದನ್ನು ನಾವು ಮರೆತಿಲ್ಲ' ಎಂದು ಸೂಚ್ಯವಾಗಿ ಹೇಳಿದರು. ಸರ್ಕಾರದ ಖಜಾನೆಯ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಲಾಗುವುದು ಎಂದೂ ಅವರು ತಿಳಿಸಿದರು.

