ನವದೆಹಲಿ: ದೇಶದ ನಿರುದ್ಯೋಗಿ ಯುವಕರನ್ನು ಪರಾವಲಂಬಿಗಳು ಮತ್ತು ಜಿರಳೆಗಳು ಎಂದು ಕರೆದಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದು ವ್ಯವಸ್ಥೆಯ ವಿರುದ್ಧದ ಟೀಕೆಗಳು ಮತ್ತು ಪ್ರಶ್ನೆಗಳನ್ನು ಎದುರಿಸಲಾಗದ ಅಸಹನೆಯ ಪ್ರತಿಬಿಂಬವಾಗಿದೆ ಎಂದು ಪವಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಕರ್ಜತ್ ಜಾಮಖೇಡ್ ಕ್ಷೇತ್ರದ ಶಾಸಕರಾಗಿರುವ ರೋಹಿತ್ ಪವಾರ್, ತಮಗೆ ಭಾರತೀಯ ನ್ಯಾಯಾಂಗದ ಬಗ್ಗೆ ಅತ್ಯುನ್ನತ ಗೌರವವಿದೆ ಎಂದು ಹೇಳುತ್ತಲೇ, ಸಂವಿಧಾನಿಕ ಹುದ್ದೆಯಲ್ಲಿರುವವರಿಂದ ಬಂದ ಇಂತಹ ಹೇಳಿಕೆಗಳು ತೀವ್ರ ನೋವುಂಟು ಮಾಡಿವೆ ಎಂದಿದ್ದಾರೆ. ಅಲ್ಲದೆ, ಇದು ಉದ್ಯೋಗದ ಭರವಸೆಗಳು ಈಡೇರದೆ, ಅವಕಾಶಗಳ ಕೊರತೆ ಮತ್ತು ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ ಹೋರಾಡುತ್ತಿರುವ ಇಡೀ ಯುವ ಪೀಳಿಗೆಯನ್ನು ಹಾಸ್ಯ ಮಾಡಿದಂತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ರೋಹಿತ್ ಪವಾರ್ ಹೇಳಿದ್ದೇನು..?
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ರೋಹಿತ್ ಪವಾರ್, ನಕಲಿ ಪದವಿ ಹೊಂದಿರುವವರು ಮತ್ತು ಹಿರಿಯ ವಕೀಲರ ಹುದ್ದೆಯ ನಾಮನಿರ್ದೇಶನಕ್ಕೆ ಸಂಬಂಧಿಸಿದ ಅರ್ಜಿಗಳ ಸಂದರ್ಭದಲ್ಲಿ ಈ ಮಾತುಗಳನ್ನು ಆಡಲಾಗಿದ್ದರೂ ಸಹ, ನಿರುದ್ಯೋಗಿ ಯುವಕರನ್ನು ಮತ್ತು ಆರ್‌ಟಿಐ ಕಾರ್ಯಕರ್ತರನ್ನು ಒಂದೇ ವರ್ಗಕ್ಕೆ ಸೇರಿಸಿ ಇಂತಹ ಪದ ಬಳಸಿರುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಯುವಕರು, ಆರ್‌ಟಿಐ ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳು ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರನ್ನು ಪರಾವಲಂಬಿಗಳಿಗೆ ಅಥವಾ ಜಿರಳೆಗಳಿಗೆ ಹೋಲಿಸುವುದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಇಂತಹ ಭಾಷೆಯು ಪ್ರಶ್ನೆ ಕೇಳುವವರ ಬಗ್ಗೆ ಇರುವ ತೀವ್ರ ಅಸಹನೆಯನ್ನು ತೋರಿಸುತ್ತದೆ ಎಂದು ಪವಾರ್ ಹೇಳಿದ್ದಾರೆ.
ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಆರ್‌ಟಿಐ ಕಾರ್ಯಕರ್ತ, ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಎತ್ತುವ ಪತ್ರಕರ್ತ ಮತ್ತು ಅಧಿಕಾರದಲ್ಲಿರುವವರ ಮುಂದೆ ಸತ್ಯವನ್ನು ಮಾತನಾಡುವ ವಿದ್ಯಾರ್ಥಿ, ಇವರೇ ಪ್ರಜಾಪ್ರಭುತ್ವದ ನಿಜವಾದ ಆಧಾರ ಸ್ತಂಭಗಳು ಎಂದಿರುವ ರೋಹಿತ್, ಇಂದಿನ ಯುವಕರು ತಮ್ಮ ಸ್ವಯಂ ಇಚ್ಛೆಯಿಂದ ನಿರುದ್ಯೋಗಿಗಳಾಗಿ ಉಳಿದಿಲ್ಲ, ಸರ್ಕಾರದ ಆರ್ಥಿಕ ವೈಫಲ್ಯ ಮತ್ತು ರಾಜಕೀಯ ಅಸಮರ್ಥತೆಯ ಬಲಿಪಶುಗಳಾಗಿದ್ದಾರೆ ಎಂದರು.
ಉದ್ಯೋಗ ಮತ್ತು ಅಭಿವೃದ್ಧಿಯ ಬಗ್ಗೆ ಭರ್ಜರಿ ಭಾಷಣಗಳನ್ನು ಮಾಡಲಾಗುತ್ತಿದ್ದರೂ, ಲಕ್ಷಾಂತರ ವಿದ್ಯಾವಂತ ಯುವಕರು ಗೌರವ, ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಪರದಾಡುತ್ತಿದ್ದಾರೆ. ಅವರು ವ್ಯವಸ್ಥೆಯಿಂದ ಉತ್ತರದಾಯಿತ್ವವನ್ನು ಮತ್ತು ತಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಒಂದು ವೇದಿಕೆಯನ್ನು ಬಯಸುತ್ತಿದ್ದಾರೆ. ಯುವಕರ ಬಗ್ಗೆ ಮಾತನಾಡುವಾಗ ನ್ಯಾಯಾಂಗವು ಸೂಕ್ಷ್ಮತೆ, ಸಂಯಮ ಮತ್ತು ಸಾಂವಿಧಾನಿಕ ವಿವೇಕವನ್ನು ಪ್ರದರ್ಶಿಸಬೇಕು ಎಂದು ಪವಾರ್ ಒತ್ತಾಯಿಸುತ್ತಾ, ಯುವಕರು ಕೇಳುವ ಪ್ರಶ್ನೆಗಳಿಗೆ ಸಂಸ್ಥೆಗಳು ಹೆದರುತ್ತಿದ್ದರೆ, ಸಮಸ್ಯೆ ಯುವಕರಲ್ಲಿ ಇಲ್ಲ, ಬದಲಿಗೆ ಇಡೀ ವ್ಯವಸ್ಥೆಯಲ್ಲಿದೆ ಎಂದು ರೋಹಿತ್ ಕುಟುಕಿದ್ದಾರೆ.
ಸಿಜೆಐ ಸೂರ್ಯ ಕಾಂತ್ ಹೇಳಿದ್ದೇನು?
ಶುಕ್ರವಾರದ ವಿಚಾರಣೆಯೊಂದರ ಸಂದರ್ಭದಲ್ಲಿ ಮಾತನಾಡಿದ್ದ ಸಿಜೆಐ ಸೂರ್ಯ ಕಾಂತ್ ಅವರು, ನಿರುದ್ಯೋಗಿ ಯುವಕರು ಜಿರಳೆಗಳಂತೆ ವರ್ತಿಸುತ್ತಾ, ಮಾಧ್ಯಮದವರು, ಸಾಮಾಜಿಕ ಜಾಲತಾಣಗಳ ಬಳಕೆದಾರರು ಅಥವಾ ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿ ವ್ಯವಸ್ಥೆಯ ಮೇಲೆ ದಾಳಿ ಮಾಡಲು ಪ್ರಾರಂಭಿಸುತ್ತಾರೆ ಎಂದು ಟೀಕಿಸಿದ್ದಾರೆ.
ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ, ವಕೀಲರೊಬ್ಬರನ್ನು ಹಿರಿಯ ವಕೀಲರನ್ನಾಗಿ ನೇಮಿಸುವ ಕುರಿತಾದ ಅರ್ಜಿಯ ವಿಚಾರಣೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಹಿರಿಯ ವಕೀಲರ ಹುದ್ದೆಯನ್ನು ಪಡೆಯಲು ಅರ್ಜಿದಾರರು ತೋರಿದ ಅತಿಯಾದ ಆತುರ ಮತ್ತು ಆಕ್ರಮಣಕಾರಿ ನಡವಳಿಕೆಯನ್ನು ನ್ಯಾಯಾಲಯವು ಖಂಡಿಸುತ್ತಾ, ಫೇಸ್‌ಬುಕ್‌ನಲ್ಲಿ ಅವರು ಬಳಸಿದ್ದಾರೆನ್ನಲಾದ ಭಾಷೆ ಮತ್ತು ವೃತ್ತಿಪರ ನಡವಳಿಕೆಯನ್ನು ಪ್ರಶ್ನಿಸಿತು.

