ಚಂಢಿಗಡ: ಬಿಜೆಪಿಯ ರಾಜ್ಯಸಭಾ ಸಂಸದೆ ರೇಖಾ ಶರ್ಮಾ ಅವರು ಮಾಜಿ ಮುಖ್ಯಮಂತ್ರಿ ಭಜನಲಾಲ್ ಕುರಿತು ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಪಕ್ಷದ ಹರ್ಯಾಣ ಘಟಕದಲ್ಲಿ ಭಿನ್ನಮತ ಭಾನುವಾರ ಇನ್ನಷ್ಟು ತೀವ್ರಗೊಂಡಿದೆ. ಹಿರಿಯ ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯಿ ಅವರು ಶರ್ಮಾ ತಕ್ಷಣ ಕ್ಷಮೆ ಕೇಳದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಂಚಕುಲಾದಲ್ಲಿ ಚುನಾವಣಾ ಸಭೆಯಲ್ಲಿ ಶರ್ಮಾರ ಹೇಳಿಕೆಗಳ ಒಂದು ವಾರದ ಬಳಿಕ ಮೌನ ಮುರಿದಿರುವ ಬಿಷ್ಣೋಯಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ 'ಅಹಂಕಾರ' ಮತ್ತು 'ಹಿರಿಯ ನಾಯಕರಿಗೆ ಅಗೌರವದ' ವಿರುದ್ಧ ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಬಿಷ್ಣೋಯಿ ಭಜನಲಾಲ್ ಅವರ ಪುತ್ರರಾಗಿದ್ದು,2022ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
'2014ರಿಂದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಬಾರಿ ಗೆದ್ದಿದ್ದು,ಎರಡರಲ್ಲಿ ನನ್ನ ಕೊಡುಗೆಯಿದೆ. ನನ್ನ ಹಾಗೂ ನನ್ನ ಪಕ್ಷದ ಮೈತ್ರಿಯಿಂದಾಗಲೇ ಬಿಜೆಪಿಗೆ ಮೊದಲ ಬಾರಿಗೆ ಹರ್ಯಾಣದಲ್ಲಿ ಸರಕಾರ ರಚಿಸಲು ಸಾಧ್ಯವಾಗಿತ್ತು. ಅಲ್ಲದೆ 2024ರಲ್ಲಿಯೂ ಭಜನಲಾಲ್ ಅವರಿಗೆ ನಿಷ್ಠವಾಗಿದ್ದ ಶೇ.7ಕ್ಕೂ ಅಧಿಕ ಮತಗಳು ಬಿಜೆಪಿಗೆ ಬೀಳುವಂತೆಯೂ ಮಾಡಿದ್ದೆ ' ಎಂದು ಬಿಷ್ಣೋಯಿ ವೀಡಿಯೊದಲ್ಲಿ ಹೇಳಿದ್ದಾರೆ.
'ಹಿರಿಯ ನಾಯಕರಿಗೆ ಅಗೌರವ ತೋರಿಸಿದರೆ ಜನರು ಅದನ್ನು ಮರೆಯುವುದಿಲ್ಲ. ಅವರು ಮರೆಯಲು ನಾವು ಬಿಡುವುದೂ ಇಲ್ಲ. ನಿಮ್ಮನ್ನು ಸಂಪೂರ್ಣವಾಗಿ ನಾಶಗೊಳಿಸುವ ಯಾವುದೇ ಹೆಜ್ಜೆಯನ್ನು ಇರಿಸುವುದನ್ನು ನನಗೆ ಅನಿವಾರ್ಯವಾಗಿಸಬೇಡಿ ' ಎಂದು ಹೇಳಿರುವ ಮಾಜಿ ಲೋಕಸಭಾ ಸಂಸದರೂ ಆಗರುವ ಬಿಷ್ಣೋಯಿ 'ನಾನು ಬಿಜೆಪಿಯ ಶಿಸ್ತಿನ ಯೊಧನಾಗಿದ್ದೇನೆ,ಇಲ್ಲದಿದ್ದರೆ ನಾನು ಈಗಾಗಲೇ ಕ್ರಮ ತೆಗೆದುಕೊಳ್ಳುತ್ತಿದ್ದೆ ' ಎಂದಿದ್ದಾರೆ.
ಹರ್ಯಾಣ ಬಿಜೆಪಿ ಅಧ್ಯಕ್ಷ ಮೋಹನಲಾಲ್ ಬಡೋಲಿ ಅವರು ಗೌರವಪೂರ್ವಕವಾಗಿ ತನ್ನ ತಂದೆಯನ್ನು ಉಲ್ಲೇಖಿಸದ್ದಕ್ಕೂ ಆಕ್ಷೇಪ ವ್ಯಕ್ತಪಡಿಸಿರುವ ಅವರು,ಪಕ್ಷವು ಭಜನಲಾಲ್‌ಅವರಿಗೆ ಯೋಗ್ಯ ಗೌರವ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಎ.24ರಂದು ಪಂಚಕುಲಾದಲ್ಲಿ ಬಿಜೆಪಿಯ ಮೇಯರ್ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಶರ್ಮಾ, ಭಜನಲಾಲ್ ಮತ್ತು ಅವರ ಪುತ್ರ ಕಾಂಗ್ರೆಸ್ ಶಾಸಕ ಚಂದರ್ ಮೋಹನ್ ಗೂಂಡಾಗಿರಿ ಮೂಲಕ ಚುನಾವಣೆಗಳಲ್ಲಿ ಗೆಲ್ಲುತ್ತಿದ್ದರು ಎಂದು ಆರೋಪಿಸಿದ್ದರು.
ಈ ಹೇಳಿಕೆಯು ಭಜನಲಾಲ್ ಕುಟುಂಬ ಮತ್ತು ಬಿಷ್ಣೋಯಿ ಸಮುದಾಯದಿಂದ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಅವಮಾನಕಾರಿ ಹೇಳಿಕೆಗಾಗಿ ಸಾರ್ವಜನಿಕವಾಗಿ ಕ್ಷಮೆ ಕೋರುವಂತೆ ಚಂದರ್ ಮೋಹನ್ ಶರ್ಮಾ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಶರ್ಮಾ ವಿರುದ್ಧ ಹಲವು ಜಿಲ್ಲೆಗಳಲ್ಲಿ ಪೋಲಿಸ್ ದೂರುಗಳೂ ದಾಖಲಾಗಿವೆ.
ತೀವ್ರ ಟೀಕೆಗಳಿಗೆ ಗುರಿಯಾದ ಬಳಿಕ ಶರ್ಮಾ ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಳ್ಳುವುದು ತನ್ನ ಉದ್ದೇಶವಾಗಿರಲಿಲ್ಲ,ಆದರೆ 1996ರ ಕಲ್ಕಾ ವಿಧಾನಸಭಾ ಚುನಾವಣೆಯಲ್ಲಿ ನಡೆದಿದ್ದ ಅಕ್ರಮಗಳು ಮತ್ತು ವಂಚನೆಗಳನ್ನು ಪ್ರಸ್ತಾಪಿಸಿದ್ದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ.

