ನವದೆಹಲಿ: ದಲಾಯಿ ಲಾಮಾರ ಉತ್ತರಾಧಿಕಾರ ಪ್ರಕ್ರಿಯೆಯಿಂದ ದೂರವಿರುವಂತೆ ಚೀನಾ ಭಾರತಕ್ಕೆ ಹೇಳಿದೆ ಹಾಗೂ ಈ ವಿಷಯದಲ್ಲಿ ಬಾಹ್ಯ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ಅದು ತಿಳಿಸಿದೆ.

ಕೇಂದ್ರೀಯ ಟಿಬೆಟಿಯನ್ ಆಡಳಿತದ ನೂತನ ರಾಜಕೀಯ ನಾಯಕರು ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಭಾರತದಲ್ಲಿರುವ ಚೀನಾ ರಾಯಭಾರ ಕಚೇರಿಯಿಂದ ಈ ಹೇಳಿಕೆ ಹೊರಬಿದ್ದಿದೆ.
ಟಿಬೆಟ್ ಸ್ವಾತಂತ್ರ್ಯವನ್ನು ಬೆಂಬಲಿಸುವ ಚಟುವಟಿಕೆಗಳಿಗೆ ಯಾವುದೇ ವೇದಿಕೆಯನ್ನು ಒದಗಿಸದಂತೆಯೂ ಚೀನಾ ಭಾರತವನ್ನು ಒತ್ತಾಯಿಸಿದೆ.
''ದಲೈ ಲಾಮಾ ಅವರ ಪುನರಾವತಾರವು ಬಹಳ ಹಿಂದಿನಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಆಚರಣೆಗಳು ಮತ್ತು ಐತಿಹಾಸಿಕ ಸಂಪ್ರದಾಯಗಳ ಭಾಗವಾಗಿದೆ. ಇದಕ್ಕೆ ಚೀನಾದ ಅನುಮೋದನೆಯ ಅಗತ್ಯವಿದೆ'' ಎಂದು ಚೀನಾ ರಾಯಭಾರ ಕಚೇರಿಯ ವಕ್ತಾರ ಯು ಜಿಂಗ್ ರವಿವಾರ ಹೇಳಿದ್ದಾರೆ.
ತಥಾಕಥಿತ 'ಕೇಂದ್ರೀಯ ಟಿಬೆಟಿಯನ್ ಆಡಳಿತ'ವನ್ನು ಯಾವುದೇ ಸಾರ್ವಭೌಮ ದೇಶವು ಮಾನ್ಯ ಮಾಡಿಲ್ಲ ಹಾಗೂ ಪುನರಾವತಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹಕ್ಕುಗಳನ್ನು ಮಂಡಿಸಲು ಅದಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಚೀನಾ ತನ್ನ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ.
ಟಿಬೆಟ್‌ನಲ್ಲಿ ಚೀನಾದ ಆಡಳಿತದ ವಿರುದ್ಧ ನಡೆದ ವಿಫಲ ದಂಗೆಯ ನಂತರ ದಲಾಯಿ ಲಾಮಾ 1959ರಿಂದ ಭಾರತದಲ್ಲಿ ದೇಶಭ್ರಷ್ಟರಾಗಿ ವಾಸಿಸುತ್ತಿದ್ದಾರೆ. ಭಾರತವು ಸುಮಾರು 70,000 ಟಿಬೆಟಿಯನ್ನರು ಮತ್ತು ದೇಶಭ್ರಷ್ಟ ಟಿಬೆಟಿಯನ್ ಸರಕಾರಕ್ಕೆ ನೆಲೆಯಾಗಿದೆ.


