ಚಂಡೀಗಢ: ಎಎಪಿ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ರಾಜ್ಯಸಭೆ ಸದಸ್ಯ ಸಂದೀಪ್ ಪಾಠಕ್ ಅವರಿಗೆ ಬಂಧನದ ಭೀತಿ ಎದುರಾಗಿದೆ.
ಪಂಜಾಬ್‌ನಲ್ಲಿ ಅವರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿದ್ದು, ದೆಹಲಿಯ ತಮ್ಮ ಅಧಿಕೃತ ನಿವಾಸದಿಂದ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಸಂದೀಪ್ ಪಾಠಕ್ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು ಅವರನ್ನು ಯಾವುದೇ ಕ್ಷಣದಲ್ಲಿ ಪೊಲೀಸರು ಬಂಧಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.
ದೆಹಲಿಯಲ್ಲಿರುವ ಅವರ ನಿವಾಸದ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಾಠಕ್ ತಮ್ಮ ಮನೆಯ ಹಿಂಬಾಗಿಲಿನಿಂದ ಕಾರಿನಲ್ಲಿ ತೆರಳುತ್ತಿರುವುದು ಕಂಡುಬಂದಿದ್ದು ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದೆ. ಅವರು ಅಪರಿಚಿತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದ್ದು, ಅವರಿಗೆ ಕಾನೂನು ನೆರವು ನೀಡಲು ಬಿಜೆಪಿ ಕಾನೂನು ಘಟಕ ಸಜ್ಜಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ತನ್ನ ಮೂಲ ತತ್ವ ಮತ್ತು ಮೌಲ್ಯಗಳಿಂದ ದೂರ ಸರಿಯುತ್ತಿದೆ ಎಂದು ಆರೋಪಿಸಿ, ಏಪ್ರಿಲ್ 24ರಂದು ರಾಜ್ಯಸಭೆ ಸದಸ್ಯರಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್, ಕ್ರಿಕೆಟಿಗ ಹರ್ಭಜನ್ ಸಿಂಗ್, ರಾಜಿಂದರ್ ಗುಪ್ತಾ, ಸ್ವಾತಿ ಮಲಿವಾಲ್ ಮತ್ತು ವಿಕ್ರಮಜಿತ್ ಸಾಹ್ನಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
10 ಸದಸ್ಯರ ಪೈಕಿ 7 ಜನ (ಮೂರನೇ ಎರಡರಷ್ಟು ಬಹುಮತ) ಸಂಸದರು ಒಟ್ಟಾಗಿ ಪಕ್ಷಾಂತರ ಮಾಡಿರುವುದರಿಂದ ಪಕ್ಷಾಂತರ ನಿಷೇದ ಕಾಯ್ದೆ ಅಡಿಯಲ್ಲಿ ಇವರ ವಿರುದ್ಧ ಅನರ್ಹತೆ ಕ್ರಮ ಕೈಗೊಳ್ಳುವುದು ಕಷ್ಟಸಾಧ್ಯ ಎನ್ನಲಾಗಿದೆ.
ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಈ ಬೆಳವಣಿಗೆಯನ್ನು ಅಕ್ರಮ ಮತ್ತು ಕಾನೂನುಬಾಹಿರ ಎಂದು ಕರೆದಿದ್ದು ಜನರ ತೀರ್ಪಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವಾಗಿ ಚರ್ಚಿಸಲು ಅವರು ಮೇ 5 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲಿದ್ದಾರೆ.

