ಬೀಡ್: ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿದ್ದರಿಂದ ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಮಹರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಪಾರ್ಲಿ ವೈಜನಾಥ್ ತಹಸಿಲ್‌ನ ಮೋಹಾ ಗ್ರಾಮದಲ್ಲಿ ಮೇ 13ರಂದು ಚಂದ್ರಹರ ರಾಜೇಭಾವು ಶಿಂಧೆ ಎನ್ನುವವರಿಗೆ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ್ದರು.
ಇದರಿಂದ ಮನನೊಂದ ಅವರು, ಮೇ 15ರಂದು ಕರೇವಾಡಿ ಗ್ರಾಮದ ಹೊರವಲಯದಲ್ಲಿರುವ ಮುಂಗಲ್ಯಾಚಮಲ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಪಾಳಮೋಕ್ಷದ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ ಅವರು, ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅವರ ತಂದೆಗೆ ಫೋನ್ ಮಾಡಿ ಇದು ನನ್ನ ಕೊನೆಯ ಕರೆ ಎಂದು ತಿಳಿಸಿದ್ದಾರೆ. ಕಪಾಳಮೋಕ್ಷ ಮಾಡಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಹಾಗಾಗಿ ಹೆಚ್ಚಿನ ತನಿಖೆಯನ್ನು ಮಾಡಲಾಗುತ್ತಿದೆ. ಕಪಾಳಮೋಕ್ಷದ ಘಟನೆಯ ಸಾಕ್ಷಿಗಳು ಮತ್ತು ಅವರ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ ಎಂದು ಸಿರ್ಸಾಲಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

