ಇಸ್ಲಾಮಾಬಾದ್: ಮೇ 10ರಂದು 'ಮರ್ಕ್-ಎ-ಹಕ್' ದಿನವನ್ನಾಗಿ ಆಚರಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ.
ಭಾರತದ 'ಆಪರೇಷನ್ ಸಿಂಧೂರ'ಕ್ಕೆ ಪ್ರತಿಯಾಗಿ ಕಳೆದ ವರ್ಷ ಭಾರತ ವಿರುದ್ಧದ ನಾಲ್ಕು ದಿನಗಳ ಸಂಘರ್ಷಕ್ಕೆ ಪಾಕಿಸ್ತಾನ 'ಮರ್ಕ್-ಎ-ಹಕ್' (ಸತ್ಯಕ್ಕಾಗಿ ಹೋರಾಟ) ಎಂದು ಹೆಸರಿಸಿತ್ತು.
ಇದರ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶೆಹಬಾಜ್, 'ವೈರಿಗಳಿಗೆ ತಕ್ಕ ಉತ್ತರ ನೀಡಿದ್ದೇವೆ' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೈಗೊಂಡಿರುವ ಪಾತ್ರಕ್ಕಾಗಿ ಶ್ಲಾಘಿಸಿದ್ದಾರೆ. ಅಲ್ಲದೆ ಸೌದಿ ಅರೇಬಿಯಾ, ಚೀನಾ, ಟರ್ಕಿ ನೀಡಿದ ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಪಾಕ್ ಮತ್ತು ಪಾಕ್ ಆಕ್ರಮಿತ ಒಂಬತ್ತು ಉಗ್ರರ ನೆಲೆಗಳನ್ನು ಗುರಿಯಾಗಿ ಭಾರತ 'ಆಪರೇಷನ್ ಸಿಂಧೂರ' ಹೆಸರಿನ ಸೇನಾ ಕಾರ್ಯಾಚರಣೆ ನಡೆಸಿತ್ತು.
ಭಾರತ ಸಶಸ್ತ್ರ ಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 100 ಭಯೋತ್ಪಾದಕರು ಹರತಾಗಿದ್ದರು.
ಇದರ ಬೆನ್ನಲ್ಲೇ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಮತ್ತಷ್ಟು ವ್ಯಾಪಿಸಿತ್ತು. ಆದರೆ ಪಾಕಿಸ್ತಾನದ ದಾಳಿಯನ್ನು ಭಾರತೀಯ ಭದ್ರತಾ ಪಡೆ ವಿಫಲಗೊಳಿಸಿದ್ದವು.
ಬಳಿಕ ಮೇ 10ರಂದು ನಡೆದ ಸೇನಾ ಕಮಾಂಡರ್ಗಳ ಮಟ್ಟದ ಮಾತುಕತೆಯಲ್ಲಿ ಯುದ್ಧ ನಿಲ್ಲಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ ಭಾರತ-ಪಾಕ್ ಬಿಕ್ಕಟ್ಟಿನಲ್ಲಿ ಮೂರನೇ ರಾಷ್ಟ್ರದ ಮಧ್ಯ ಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.

