ವಾಷಿಂಗ್ಟನ್: 'ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಿರುವುದು ಇಡೀ ವಿಶ್ವದಾದ್ಯಂತ ಪರಮಾಣು ಸ್ಪರ್ಧೆಗೆ ಪ್ರಚೋದಿಸಲಿದೆ' ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ತಿಳಿಸಿದ್ದಾರೆ.
'ಇರಾನ್ ಜತೆ ಶಾಂತಿ ಒಪ್ಪಂದ ವಿಫಲವಾದರೆ, ಮತ್ತೆ ಸೇನಾ ಕಾರ್ಯಾಚರಣೆ ನಡೆಸಲು ಅಮೆರಿಕ ಸದಾ ಸಿದ್ಧವಾಗಿದೆ' ಎಂದು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.
ಸಂಯುಕ್ತ ಅರಬ್ ಒಕ್ಕೂಟ, ಕತಾರ್ ಸೇರಿದಂತೆ ಅರಬ್ ರಾಷ್ಟ್ರಗಳ ಮನವಿಯಂತೆ ಇರಾನ್ ಮೇಲಿನ ದಾಳಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ಘೋಷಿಸಿದ್ದರು. ಇದರ ಬೆನ್ನಲ್ಲೇ, ವ್ಯಾನ್ಸ್ ಈ ಹೇಳಿಕೆ ನೀಡಿದ್ದಾರೆ.
'ನಮ್ಮ ಪ್ರಕಾರ, ಇರಾನಿಯನ್ನರು ಒಪ್ಪಂದ ಮಾಡಲು ಬಯಸಿದ್ದಾರೆ. ಉತ್ತಮ ನಂಬಿಕೆಯಿಂದ ಅಮೆರಿಕದ ಅಧ್ಯಕ್ಷರು ಮಾತುಕತೆ ನಡೆಸಿದ್ದು, ಇಲ್ಲಿಯವರೆಗೂ ಬಂದಿದೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬ ಟ್ರಂಪ್ ಅವರ ಮೂಲ ಬೇಡಿಕೆಯಾಗಿದ್ದು, ಇದಕ್ಕಾಗಿ ರಾಜತಾಂತ್ರಿಕತೆಯನ್ನು ಬಲಿಕೊಡಲು ಸಿದ್ಧರಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

