ವಾಷಿಂಗ್ಟನ್: ಇರಾನ್ ಆಡಳಿತದಲ್ಲಿ ಬದಲಾವಣೆ ಮಾಡಿ ತೀವ್ರವಾದಿ ಮಹಮೂದ್ ಅಹ್ಮದಿನೆಜಾದ್ ಅವರನ್ನು ಅಲ್ಲಿನ ಅಧ್ಯಕ್ಷರನ್ನಾಗಿ ಮಾಡುವ ಬಗ್ಗೆ ಅಮೆರಿಕ ಮತ್ತು ಇಸ್ರೇಲ್ ಯುದ್ಧದ ಆರಂಭದ ದಿನಗಳಲ್ಲಿ ಯೋಜನೆ ರೂಪಿಸಿದ್ದವು.
ಯುದ್ಧ ತಂತ್ರಗಳನ್ನು ರೂಪಿಸುವಾಗ, ಇರಾನ್‌ನ ಮಾಜಿ ಅಧ್ಯಕ್ಷ ಅಹ್ಮದಿನೆಜಾದ್ ಅವರ ಜೊತೆ ಇಸ್ರೇಲ್ ಮತ್ತು ಅಮೆರಿಕ ಸಮಾಲೋಚನೆ ನಡೆಸಿದ್ದವು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಯುದ್ಧದ ಮೊದಲ ದಿನದಂದೇ ಇಸ್ರೇಲ್ ದಾಳಿಯಿಂದಾಗಿ ಅಹ್ಮದಿನೆಜಾದ್ ಗಾಯಗೊಂಡಿದ್ದರು ಮತ್ತು ಬಳಿಕ ಆಡಳಿತ ಬದಲಾವಣೆ ಬಗ್ಗೆ ಭ್ರಮನಿರಸನಗೊಂಡರು ಎಂದು ಅಮೆರಿಕ ಅಧಿಕಾರಿಗಳು ಹೇಳಿರುವುದಾಗಿ ವರದಿಯೊಂದು ತಿಳಿಸಿದೆ.
ಅಹ್ಮದಿನೆಜಾದ್ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸುವ ಉದ್ದೇಶದಿಂದ ಇಸ್ರೇಲ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇರಾನ್‌ನ ರಾಜಕೀಯ, ಸಾಮಾಜಿಕ ಮತ್ತು ಸೇನಾ ಪರಿಸ್ಥಿತಿಯನ್ನು ಅಹ್ಮದಿನೆಜಾದ್ ಸಮರ್ಥವಾಗಿ ನಿಭಾಯಿಸುವರು ಎಂಬ ಭರವಸೆಯನ್ನು ಅಮೆರಿಕ ಮತ್ತು ಇಸ್ರೇಲ್ ಹೊಂದಿತ್ತು ಎಂದು ವರದಿ ತಿಳಿಸಿದೆ.
2005ರಿಂದ 2013ರವರೆಗೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಹ್ಮದಿನೆಜಾದ್ ಅವರು ಇಸ್ರೇಲ್ ಮತ್ತು ಅಮೆರಿಕ ವಿರೋಧಿ ನಿಲುವು ಹೊಂದಿದ್ದರು. ಅಧಿಕಾರ ಕಳೆದುಕೊಂಡ ಬಳಿಕ, ಇರಾನ್‌ನ ಆಡಳಿತಗಾರರ ವಿರುದ್ಧ ಕಿಡಿಕಾರಿದ್ದರು. ಭ್ರಷ್ಟಾಚಾರದಲ್ಲಿ ಆಡಳಿತಗಾರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.
1

