ಕೋಲ್ಕತ್ತ: ಪಶ್ಚಿಮ ಬಂಗಾಳದ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ 'ಜಂಟಿ ವೇದಿಕೆ'ಯೊಂದನ್ನು ನಿರ್ಮಿಸುವ ಮೂಲಕ ಬಿಜೆಪಿ ವಿರುದ್ಧ ಹೋರಾಡಬೇಕಿದೆ ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಶನಿವಾರ(ಮೇ 9) ಮನವಿ ಮಾಡಿದ್ದಾರೆ.
ಶತ್ರುವಿನ ಶತ್ರು ಮಿತ್ರ ಎಂದು ಯೋಚಿಸಲು ಇದು ಸರಿಯಾದ ಸಮಯವಲ್ಲ.
ನಮ್ಮೆಲ್ಲರ ಮೊದಲ ಶತ್ರು ಬಿಜೆಪಿಯಾಗಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ಅವರ ವಿರುದ್ಧ ನಿಲ್ಲಬೇಕಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷಗಳು ಮಾತುಕತೆಗೆ ಮುಂದಾದರೂ, ನಾನು ಅವರೊಂದಿಗೆ ಚರ್ಚಿಸಲು ಸಿದ್ಧ ಎಂದು ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ರಾಜ್ಯದಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ದಾಳಿ ನಡೆಸಲಾಗುತ್ತಿದೆ. ಗೂಂಡಾಗಿರಿ ಆರಂಭವಾಗಿದೆ, ನಾನು 2011ರಲ್ಲಿ ಅಧಿಕಾರಕ್ಕೆ ಬಂದಾಗ ಈ ರೀತಿಯ ಕೃತ್ಯಗಳಿಗೆ ಬೆಂಬಲ ನೀಡಿರಲಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ವಿರುದ್ಧದ ಹೋರಾಟದಲ್ಲಿ ವಿದ್ಯಾರ್ಥಿ ಸಂಘಟನೆಗಳು ಮತ್ತು ಎನ್‌ಜಿಒಗಳು ಕೂಡ ಒಟ್ಟಾಗಿ ನಿಲ್ಲುವಂತೆ ಅವರು ಕರೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಪಶ್ಚಿ ಬಂಗಾಳ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಬಹುಮತ ಪಡೆದ ಬಿಜೆಪಿ, ಸುವೇಂದು ಅಧಿಕಾರಿ ನೇತೃತ್ವದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅಧಿಕಾರದಲ್ಲಿದ್ದ ಟಿಎಂಸಿ 80 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು.

