ಕಾಸರಗೋಡು: ಎರ್ನಾಕುಳಂ ಕೇಂದ್ರೀಕರಿಸಿ ನಡೆದ ಅವಯವ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಮುಖ್ಯ ಆರೋಪಿ ಕಾಸರಗೋಡು ಕಳನಾಡು ಚಳಿಯಂಗೋಡ್‍ನ ಮುಹಮ್ಮದ್ ನಜೀಬ್ ಕಲ್ಲಟ್ರ (53) ಹಾಗೂ ಈತನ ಪತ್ನಿ ರಶೀದಾಳನ್ನು ಇನ್ನೊಮ್ಮೆ ಕಸ್ಟಡಿಗೆ ತೆಗೆದು ತನಿಖೆಗೊಳಪಡಿಸಲು ಕೊಚ್ಚಿ ಸಿಟಿ ಪೋಲೀಸರು ನಿರ್ಧರಿಸಿದ್ದಾರೆ. ಆರೋಪಿಗಳನ್ನು ರೂರಲ್ ಪೋಲೀಸರು ಐದು ದಿನಗಳ ಕಾಲ ಕಸ್ಟಡಿಗೆ ತೆಗೆದಿದ್ದರು. ಕಸ್ಟಡಿ ಕಾಲಾವಧಿ ಸೋಮವಾರ ಕೊನೆಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಆರೋಪಿಗಳನ್ನು ಇನ್ನಷ್ಟು ತನಿಖೆಗೊಳಪಡಿಸುವ ಉದ್ದೇಶದಿಂದ ಅವರನ್ನು ಇನ್ನೊಮ್ಮೆ ಕಸ್ಟಡಿಗೆ ತೆಗೆದು ತನಿಖೆ ನಡೆಸಲು ಕೊಚ್ಚಿ ಸಿಟಿ ಪೋಲೀಸರು ನಿರ್ಧರಿಸಿದ್ದಾರೆ. ಅವಯವ ಸಾಗಾಟಕ್ಕೆ ಸಂಬಂಧಿಸಿ ಅಂಬಲಮೇಡ್ ಪೋಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತನಿಖೆಗಾಗಿ ಈ ಇಬ್ಬರನ್ನು ಕಸ್ಟಡಿಗೆ ತೆಗೆಯಲಿರುವುದಾಗಿ ತಿಳಿದುಬಂ ದಿದೆ. ಇವರನ್ನು ಕಸ್ಟಡಿಗೆ ಪಡೆಯಲು ಪೋಲೀಸರು ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವರು. ನಜೀಬ್‍ನ ಆರ್ಥಿಕ ವ್ಯವಹಾರಗಳು ಹಾಗೂ ಪೋನ್ ಕರೆಗಳನ್ನು ಪರಿಶೀ ಲಿಸಿದಾಗ ಲಭಿಸಿದ ಮಾಹಿತಿಯ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆಯೆಂದು ತಿಳಿದಬಂದಿದೆ.
ಬಡವರನ್ನು ಬಲೆಯಲ್ಲಿ ಸಿಲುಕಿಸಿ 10 ಲಕ್ಷ ರೂ.ಗಳಿಗಿಂತ ಕಡಿಮೆ ಮೊತ್ತ ನೀಡಿ ಕೋಟ್ಯಂತ ರೂ. ಪಡೆದುಕೊಂಡ ಬಳಿಕ ಕಿಡ್ನಿ ಸಹಿತ ಅವಯವಗಳನ್ನು ವಿದೇಶಗಳ ಸಹಿತ ಹಲವರಿಗೆ ನೀಡಿರುವುದಾಗಿ ಪೋಲೀಸರಿಗೆ ಮಾಹಿತಿ ಲಭಿಸಿತ್ತು. ಅವಯವ ಹಸ್ತಾಂತರದ ಹಲವು ದಾಖಲೆಗಳನ್ನು ಸಿದ್ಧಪಡಿಸಿರುವುದು ಕಾಸರಗೋಡಿನಲ್ಲಾಗಿದೆಯೆಂದೂ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಮುಹಮ್ಮದ್ ನಜೀಬ್ ಪತ್ನಿ ರಶೀದಾರ ಹೊರತು ಪುನ್ನತ್ತುನಾಡು ಕುಮಾರಪುರದ ಸನ್ನಿ ವರ್ಗೀಸ್, ಆತನ ಪತ್ನಿ ಸಿನಿ ವರ್ಗೀಸ್, ಚೇಲಪ್ಪುಳಂ ಕವುಂಙಪ್ಪಾರದ ಸನೋಜ್, ರೀಜಾ, ಸುಧೀರ್, ವಿನೋದ್ ಎಂಬವರನ್ನು ಬಂಧಿಸಲಾಗಿದೆ. ಈ ಅವಯವ ವಂಚನೆ ದಂಧೆಯಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂದು ತಿಳಿಯಲು ತನಿಖೆಯು ಮುಂದುವರಿಯುತ್ತಿದೆಯೆಂದು ಹೇಳಲಾಗುತ್ತಿದೆ.

