HEALTH TIPS

ಮನೆಕೆಲಸ ಮಾಡದಿರುವುದು ಕ್ರೌರ್ಯವಲ್ಲ; ಪತ್ನಿಯರು ಸೇವಕಿಯರಲ್ಲ: ಬಾಂಬೆ ಹೈಕೋರ್ಟ್

 ಮುಂಬೈ: ಅಡುಗೆ ಮಾಡದಿರುವುದು, ಮನೆ ಶುಚಿಗೊಳಿಸದಿರುವುದು ಅಥವಾ ಪತಿಯ ಪೋಷಕರನ್ನು ನೋಡಿಕೊಳ್ಳದಿರುವುದನ್ನು ಮಾತ್ರ ಆಧರಿಸಿ ಪತ್ನಿಯ ವಿರುದ್ಧ 'ಕ್ರೌರ್ಯ' ಆರೋಪ ಮಾಡಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

'ಮದುವೆ ಎಂಬುದು ಸಮಾನರ ನಡುವಿನ ಪಾಲುದಾರಿಕೆ. 

ಅದು ಸೇವಾ ಒಪ್ಪಂದವಲ್ಲ. ಪತ್ನಿಯರನ್ನು ಸೇವಕಿಯರಂತೆ ಕಾಣಲು ಸಾಧ್ಯವಿಲ್ಲ' ಎಂದು ನ್ಯಾಯಾಲಯ ಹೇಳಿದೆ. 


ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡಿದ್ದ ಕುಟುಂಬ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ. ಜೊತೆಗೆ, ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿಗೆ ತಿಂಗಳಿಗೆ 20,000 ರೂಪಾಯಿ ಜೀವನಾಂಶ ನೀಡುವಂತೆ ಪತಿಗೆ ಸೂಚಿಸಿದೆ.

ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಪತಿ, ತನ್ನ ಪತ್ನಿ ಅಡುಗೆ ಮಾಡುತ್ತಿರಲಿಲ್ಲ, ಮನೆಕೆಲಸ ನಿರ್ವಹಿಸುತ್ತಿರಲಿಲ್ಲ ಹಾಗೂ ತನ್ನ ಪೋಷಕರನ್ನು ನೋಡಿಕೊಳ್ಳುತ್ತಿರಲಿಲ್ಲ ಎಂದು ಆರೋಪಿಸಿದ್ದರು. ಇದರಿಂದ ತಾನು ಮಾನಸಿಕ ಕ್ರೌರ್ಯ ಅನುಭವಿಸಿದ್ದೇನೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆದರೆ, ಈ ಆರೋಪಗಳನ್ನು ಹೈಕೋರ್ಟ್ ಒಪ್ಪಲಿಲ್ಲ. ಮನೆಕೆಲಸಗಳನ್ನು ಮಾಡದಿರುವುದನ್ನೇ ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ದಂಪತಿ 2002ರ ಫೆಬ್ರವರಿ 28ರಂದು ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳಲ್ಲಿ ಅವರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು. 2002ರ ಜುಲೈ 7ರಂದು ಪತ್ನಿ ಪತಿ ಮನೆಯನ್ನು ತೊರೆದು ತನ್ನ ಪೋಷಕರ ಮನೆಗೆ ತೆರಳಿದ್ದರು.

2004ರಲ್ಲಿ ಪತಿ ವಿಚ್ಛೇದನ ಕೋರಿ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದರು. ಪತ್ನಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. 2010ರಲ್ಲಿ ಕುಟುಂಬ ನ್ಯಾಯಾಲಯವು ಪತಿಗೆ ವಿಚ್ಛೇದನ ನೀಡಿದ್ದಲ್ಲದೆ, ಪತ್ನಿಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪತ್ನಿ ಅಸಭ್ಯವಾಗಿ ವರ್ತಿಸುತ್ತಿದ್ದಳು, ಆತ್ಮಹತ್ಯೆ ಬೆದರಿಕೆ ಹಾಕುತ್ತಿದ್ದಳು ಹಾಗೂ ಪೊಲೀಸರಿಗೆ ದೂರು ನೀಡುವ ಮೂಲಕ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದಳು ಎಂದು ಪತಿ ಆರೋಪಿಸಿದ್ದರು.

ಇದಕ್ಕೆ ಪ್ರತಿಯಾಗಿ, ಪತಿ ಮತ್ತು ಅವರ ಕುಟುಂಬದವರು ವರದಕ್ಷಿಣೆ ಹಾಗೂ ದುಬಾರಿ ಆಭರಣಕ್ಕಾಗಿ ಒತ್ತಡ ಹೇರುತ್ತಿದ್ದರು. ಸಣ್ಣ ವಿಷಯಗಳಿಗೂ ಕಿರುಕುಳ ಮತ್ತು ಅವಮಾನ ಮಾಡುತ್ತಿದ್ದರು ಎಂದು ಪತ್ನಿ ಆರೋಪಿಸಿದ್ದರು.

ಈ ನಡುವೆ, ಪತ್ನಿ ಕಲಾ ತರಗತಿಗಳು ನಡೆಸುತ್ತಿರುವುದರಿಂದ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದಾರೆ. ಆದ್ದರಿಂದ ಶಾಶ್ವತ ಜೀವನಾಂಶ ನೀಡಬೇಕಿಲ್ಲ ಎಂದು ಪತಿ ವಾದಿಸಿದ್ದರು.

ಆದರೆ, ಪತಿಯ ಆದಾಯವನ್ನು ಕೇವಲ ತೆರಿಗೆ ರಿಟರ್ನ್ ಆಧರಿಸಿ ಅಳೆಯಲು ಸಾಧ್ಯವಿಲ್ಲ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಕಾರಣ ಅವರಿಗೆ ಹೆಚ್ಚಿನ ಆದಾಯ ಗಳಿಸುವ ಸಾಮರ್ಥ್ಯವಿದೆ ಎಂದು ಹೈಕೋರ್ಟ್ ಹೇಳಿದೆ.

ಹಣದುಬ್ಬರ ಮತ್ತು ಜೀವನ ವೆಚ್ಚ ಏರಿಕೆಯನ್ನು ಪರಿಗಣಿಸಿ, ಪತ್ನಿಗೆ ತಿಂಗಳಿಗೆ 20,000 ರೂಪಾಯಿ ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries