ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಯ ಅಂಗವಾಗಿ ನೀಲೇಶ್ವರ ಮಾರುಕಟ್ಟೆ ಜಂಕ್ಷನ್‍ನಲ್ಲಿ ಪ್ರಸಕ್ತ ಭೂಮಿ ಸಮತಟ್ಟುಗೊಳಿಸಿ ನಿರ್ಮಿಸುತ್ತಿರುವ ಕಾಮಗಾರಿ ಬದಲು, ಮೇಲ್ಸೇತುವೆ ನಿರ್ಮಾಣದೊಮದಿಗೆ ರಸ್ತೆಕಾಮಗಾರಿ ನಡೆಸುವ ಬಗ್ಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರಾಜ್ಯ ಸರ್ಕಾರಕ್ಕೆ ತುರ್ತು ವರದಿಯನ್ನು ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ನೇಮಿಸಿದ ತಜ್ಞರ ಸಮಿತಿ ನೀಡಿರುವ ವದಿ ಆಧಾರದ ಮೇಲೆ ಸರ್ಕಾರಕ್ಕೆ ಈ ಶಿಫಾರಸು ಸಲ್ಲಿಸಲಾಗಿದೆ. ಸಮಗ್ರ ಶಿಫಾರಸುಗಳನ್ನೊಳಗೊಂಡ ವರದಿಯನ್ನು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಭೂ ಕಂದಾಯ ಆಯುಕ್ತರಿಗೆ ಸಲ್ಲಿಸಲಾಯಿತು.
ಪ್ರಸಕ್ತ ನಡೆಯುತ್ತಿರುವ ಕಾಮಗಾರಿಯನ್ವಯ ಮಾರುಕಟ್ಟೆ ಜಂಕ್ಷನ್‍ನಲ್ಲಿ ಹೆಚ್ಚಿನ ಪ್ರಮಾಣದ ಮಣ್ಣನ್ನು ತುಂಬಿಸುವ ಮೂಲಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದು ಪೂರ್ಣಗೊಂಡ ನಂತರ, ನೀಲೇಶ್ವರ ಪೇಟೆ ಮಣ್ಣಿನ ಗೋಡೆಗಳಿಂದ ಎರಡು ಭಾಗಗಳಾಗಿ ವಿಂಗಡಣೆಗೊಳ್ಳಲಿದ್ದು, ಇದು ಭವಿಷ್ಯದಲ್ಲಿ ಗಂಭೀರ ಸಂಚಾರ ದಟ್ಟಣೆಯನ್ನು ಉಂಟುಮಾಡುವ ಸಾಧ್ಯತೆಯಿದೆ, ಜತೆಗೆ ನಗರದ ನೈಸರ್ಗಿಕ ಅಭಿವೃದ್ಧಿಗೆ ಹಿನ್ನಡೆಯನ್ನುಂಟುಮಾಡಲಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ. ಪ್ರಸಕ್ತ ಯೋಜನೆ ವಿರುದ್ಧ ಈ ಪ್ರದೇಶದಲ್ಲಿ ಸಾರ್ವಜನಿಕರಿಂದ ಪ್ರಬಲ ವಿರೋಧವೂ ನಡೆಯುತ್ತಿರುವುದಾಗಿ ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದಾರೆ.
ನೀಲೇಶ್ವರಂ ಪೆÇಲೀಸ್ ಠಾಣೆಯಿಂದ ಕೊಟ್ಟಪುರಂ ರಸ್ತೆಯವರೆಗೆ ಮಣ್ಣು ತುಂಬುವ ಮೂಲಕ ಹೊಸ ಮೂರು ಪಥದ ಸೇತುವೆಯನ್ನು ಮಾತ್ರ ನಿರ್ಮಿಸಿದರೆ, ಐದು ಪಥಗಳ ಸಂಚಾರ ಮಾತ್ರ ಸಾಧ್ಯವಾಗುತ್ತದೆ. ಇದು ಭವಿಷ್ಯದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುವುದರಿಂದ, ಹಳೆಯ ಸೇತುವೆಯನ್ನು ಕೆಡವಿ ಈ ಮೂಲಕ ಹೊಸ ಮೂರು ಪಥದ ಸೇತುವೆಯನ್ನು ನಿರ್ಮಿಸಿ, ಒಟ್ಟು ಆರು ಪಥಗಳ ರಸ್ತೆ ನಿರ್ಮಾಣಮಾಡುವಂತೆ ವರದಿಯಲ್ಲಿ ಸೂಚಿಸಲಾಗಿದೆ.



