ಬದಿಯಡ್ಕ: ರೋಗ ಬಂದಮೇಲೆ ಚಿಕಿತ್ಸೆ ಮಾಡುವುದರ ಬದಲು ರೋಗ ಬಾರದಂತೆ ತಡೆಗಟ್ಟಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವುದೇ ಜಾಣತನ. ಮಳೆಗಾಲದಲ್ಲಿ ಅನೇಕ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುತ್ತವೆ. ಇದಕ್ಕೆಲ್ಲ ಪ್ರಧಾನ ಕಾರಣ ನಮ್ಮ ಪರಿಸರವೇ ಆಗಿರುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ.ತಿಳಿಸಿದರು.
ಬದಿಯಡ್ಕ ಗ್ರಾಮಪಂಚಾಯಿತಿಯ ನೇತೃತ್ವದಲ್ಲಿ ಮಳೆಗಾಲ ಪೂರ್ವ ಸ್ವಚ್ಛತಾ ಕಾರ್ಯದ ಅಂಗವಾಗಿ ನಡೆದ ಸಂದೇಶ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮನೆ ಹಾಗೂ ಪರಿಸರವನ್ನು ಪ್ರತಿಯೊಬ್ಬರೂ ಸ್ವಚ್ಛವಾಗಿರಿಸುವತ್ತ ಗಮನಹರಿಸಬೇಕು. ಎಲ್ಲೆಂದರಲ್ಲಿ ಕಸಕಡ್ಡಿಗಳು, ತ್ಯಾಜ್ಯಗಳನ್ನು ಎಸೆಯಲೇಬಾರದು. ತೆಂಗಿನ ಗೆರಟೆಗಳು, ಹೂವಿನ ಕುಂಡ ಮೊದಲಾದ ನೀರು ಕಟ್ಟಿನಿಲ್ಲುವ ಸ್ಥಳಗಳಿಗೆ ವಿಶೇಷ ಗಮನವಿರಿಸಿಕೊಳ್ಳಬೇಕು ಎಂದರು.
ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹಮೀದ್ ಕೆಡಂಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ರಾಮಪ್ಪ ಮಂಜೇಶ್ವರ, ಕ್ಷೇಮಕಾರ್ಯ ಸ್ಥಾಯಿಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ವಾರ್ಡ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶ್ಯಾಮಪ್ರಸಾದ್ ಸರಳಿ, ಹರೀಶ, ಮಧುಸೂದನ, ಅನ್ನತ್ ಬೀವಿ, ಬಿಂದ್ಯಾ ಎಂ., ಉಷಾ ಪಳ್ಳತ್ತಡ್ಕ, ಪಂಚಾಯತಿ ಕಾರ್ಯದರ್ಶಿ ಮನೋಜ್ ಕುಮಾರ್, ಸಹಾಯಕ ಕಾರ್ಯದರ್ಶಿ ಪಿ.ಕೆ. ಸಜಿ, ಆರೋಗ್ಯ ಮೇಲ್ವಿಚಾರಕ ಎಂ. ಮಧುಸೂದನನ್, ಆರೋಗ್ಯ ಪರಿವೀಕ್ಷಕ ರಾಜೇಶ್ ನಂಬ್ಯಾರ್, ಪಿ.ಕೆ. ಬಾಬುರಾಜ್, ಸೂರಜ್, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕಾರ್ಯದರ್ಶಿ ರವಿ ನವಶಕ್ತಿ ಮೊದಲಾದವರು ನೇತೃತ್ವ ವಹಿಸಿದ್ದರು. ಪಂಚಾಯತಿ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಸಿರು ಕ್ರಿಯಾಸೇನೆ, ಉದ್ಯೋಗ ಖಾತರಿ ಕಾರ್ಮಿಕರು, ಎ.ಡಿ.ಎಸ್, ಸಿ.ಡಿ.ಎಸ್ ಸದಸ್ಯರು, ವ್ಯಾಪಾರಿಗಳು, ಸಮಾಜ ಸೇವಕರು ಮುಂತಾದವರು ರ್ಯಾಲಿಯಲ್ಲಿ ಪಾಲ್ಗೊಂಡರು. ಬಳಿಕ ಬದಿಯಡ್ಕ ಪೇಟೆ (ಟೌನ್), ಸಮುದಾಯ ಆರೋಗ್ಯಕೇಂದ್ರ ಪರಿಸರ ಹಾಗೂ ಪಂಚಾಯತ್ ಪರಿಸರದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದರು.

