ನವದೆಹಲಿ: ಡಿಜಿಟಲ್ ಕಣ್ಗಾವಲು ಮತ್ತು ಸೈಬರ್ ವಂಚನೆ ಕುರಿತ ತಮ್ಮ ಕೆಲಸಕ್ಕಾಗಿ ಭಾರತೀಯ ಪತ್ರಕರ್ತರಾದ ಆರ್.ಕೆ. ಆನಂದ್ ಮತ್ತು ಸುಪರ್ಣಾ ಶರ್ಮಾ ಪ್ರತಿಷ್ಠಿತ ಪುಲಿಟ್ಝರ್ ಪ್ರಶಸ್ತಿ ಪಡೆದಿದ್ದಾರೆ.
ಆನಂದ್ ಮತ್ತು ಶರ್ಮಾ ಇಲಸ್ಟ್ರೇಟಡ್ ರಿಪೋರ್ಟಿಂಗ್ ಮತ್ತು ಕಾಮೆಂಟರಿ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ ಎಂಬದಾಗಿ ಸೋಮವಾರ ಘೋಷಿಸಲಾಗಿದೆ.
ಅವರು 'ಬ್ಲೂಮ್‌ಬರ್ಗ್'ನ ನಟಾಲೀ ಒಬಿಕೊ ಪಿಯರ್‌ಸನ್ ಜೊತೆ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
'ಬ್ಲೂಮ್‌ಬರ್ಗ್'ಗಾಗಿ ತಯಾರಿಸಲಾದ 'ಟ್ರ್ಯಾಪ್ಡ್' ಎಂಬ ಹೆಸರಿನ ಪ್ರಶಸ್ತಿ ವಿಜೇತ ವರದಿಯು ಭಾರತದ ವೈದ್ಯೆಯೊಬ್ಬರ 'ಡಿಜಿಟಲ್ ಬಂಧನ' ಎಂಬ ಆಘಾತಕಾರಿ ಘಟನೆಯನ್ನು ವಿವರಿಸುತ್ತದೆ ಎಂದು 'ಪುಲಿಟ್ಝರ್ ಪ್ರೈಝಸ್' ವೆಬ್‌ಸೈಟ್ ಹೇಳಿದೆ. ವೈದ್ಯೆಯನ್ನು ''ದೃಶ್ಯಗಳು ಮತ್ತು ಮಾತುಗಳ'' ಮೂಲಕ ಹೆದರಿಸಿ ಅವರ ಫೋನ್ ಮೂಲಕ 'ಡಿಜಿಟಲ್ ಬಂಧನ'ದಲ್ಲಿಡಲಾಗಿತ್ತು. ಈ ವರದಿಯು ಡಿಜಿಟಲ್ ಕಣ್ಗಾವಲು ಮತ್ತು ಡಿಜಿಟಲ್ ಹಗರಣಗಳ ಜಾಗತಿಕ ಸವಾಲಿನತ್ತ ಬೆಳಕು ಚೆಲ್ಲಿದೆ ಎಂದು ವೆಬ್‌ಸೈಟ್‌ನಲ್ಲಿ ಬಣ್ಣಿಸಲಾಗಿದೆ.
ಅಮೆರಿಕದ ಕೊಲಂಬಿಯ ವಿಶ್ವವಿದ್ಯಾನಿಲಯ ಕೊಡುವ ಪುಲಿಟ್ಝರ್ ಪ್ರಶಸ್ತಿಯನ್ನು ಪತ್ರಿಕೋದ್ಯಮ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆ ಕ್ಷೇತ್ರದ ಅತ್ಯುನ್ನತ ಗೌರವ ಎಂಬುದಾಗಿ ಪರಿಗಣಿಸಲಾಗುತ್ತದೆ.
ಆನಂದ್ ಮುಂಬೈಯ ಚಿತ್ರ ಮತ್ತು ದೃಶ್ಯ ಕಲಾವಿದ. ಸುಪರ್ಣಾ ಶರ್ಮಾ ಸ್ವತಂತ್ರ ಪತ್ರಕರ್ತೆಯಾಗಿದ್ದಾರೆ.

