ಮಧೂರು: ಜ್ಞಾನದ ಪ್ರತೀಕವಾಗಿರುವ ವೇದಗಳ ಉಚ್ಚಾರಣೆಯಿಂದ ಮನಸ್ಸಿಗೆ ಶಾಂತಿ, ಏಕಾಗ್ರತೆ ಉಂಟಾಗುವುದಾಗಿ ನಿವೃತ್ತ ಮುಖ್ಯೋಪಾಧ್ಯಾ, ವಿದ್ವಾಂಸ ಶ್ಯಾಮ್ ಪ್ರಸಾದ್ ಕುಳಮರ್ವ ತಿಳಿಸಿದ್ದಾರೆ. ಅವರು ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆದ ವೇದಪಾಠ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಮಧೂರು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ರಾಜೇಶ್.ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಕಾರ್ಯದರ್ಶಿ ಕೆ. ನಾರಾಯಣಯ್ಯ, ದೇವಸ್ಥಾನದ ಪವಿತ್ರಪಾಣಿ ರತನ್ ಕುಮಾರ್ ಕಾಮಡ, ಸಹಾಯಕ ಅರ್ಚಕ ಕೃಷ್ಣ ಮೂರ್ತಿ, ವಿಷ್ಣು ಮೂರ್ತಿ ಕಕ್ಕಿಲ್ಲಾಯ, ಮುರಳೀಧರ ಎಡಪ್ಪಾಡಿ, ದೇವಸ್ಥಾನದ ಸಿಬ್ಬಂದಿ ಕೆ.ಎಸ್ ಮಧ್ಯಸ್ಥ ಮೊದಲಾದವರು ಉಪಸ್ಥಿತರಿದದರು. ವೇದಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಶಾಲು, ಭಗವದ್ಗೀತೆ ಸೇರಿದಂತೆ ಇತರ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭ ವೇದ ಪಾಠಶಾಲೆಯ ಗುರುಗಳಾದ ಶ್ರೀ ಕೃಷ್ಣ ಮಯ್ಯ ಅವರನ್ನು ದೇಗುಲದ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಅತಿಥಿಗಳು ಶಾಲು ಹೊದಿಸಿ, ಫಲ ತಾಂಬೂಲಾದಿ ಗಳನ್ನು, ಗುರು ದಕ್ಷಿಣೆಯನ್ನು ನೀಡಿ ಗೌರವಾರ್ಪಣೆ ಮಾಡಿ ಗೌರವಿಸಿದರು. ಸಹಾಯಕ ಗುರುಗಳಾಗಿ ಸಹಕರಿಸಿದ ರಾಮ್ ಪ್ರಸಾದ್ ಕೂಡ್ಲು, ವಸಂತ ಕಲ್ಲೂರಾಯ, ಆದಿತ್ಯ ಕಾರಂತ ಇವರಿಗೂ ಗುರು ವಂದನೆ ಸಲ್ಲಿಸಲಾಯಿತು.
ವೇದ ಪಾಠಶಾಲೆಯ ವಿದ್ಯಾರ್ಥಿಗಳು ವೇದ ಪ್ರದರ್ಶನ ನಡೆಸಿದರು. ಪ್ರಾರಂಭದಲ್ಲಿ ದೇವಸ್ಥಾನದ ವ್ಯವಸ್ಥಾಪಕ ಮತ್ತು ಶಿಬಿರದ ಸಂಚಾಲಕ ಬಿ.ಎನ್ ಸುಬ್ರಹ್ಮಣ್ಯ ರಂಗಾಭಟ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಿವೃತ್ತ ಅಧ್ಯಾಪಕ ನರಸಿಂಹ ಮಯ್ಯ ಎಂ ಮಧೂರು ನಿರೂಪಿಸಿದರು. ನಿವೃತ್ತ ಅಧ್ಯಾಪಕ ಕೃಷ್ಣ ಕಾರಂತ ವಂದಿಸಿದರು.



