ನವದೆಹಲಿ: ಭಾರತೀಯ ಸೇನಾಪಡೆಗಳ ನೂತನ ಮುಖ್ಯಸ್ಥರನ್ನಾಗಿ(ಸಿಡಿಎಸ್) ಲೆಫ್ಟಿನೆಂಟ್ ಜನರಲ್ ಎನ್. ಎಸ್. ರಾಜಾ ಸುಬ್ರಮಣಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರು ಮೇ 30ರಂದು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದು, ಆ ಹುದ್ದೆಗೆ ಎನ್.ಎಸ್. ರಾಜಾ ಸುಬ್ರಮಣಿ ಏರಲಿದ್ದಾರೆ.
ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮುಂದಿನ ಆದೇಶದವರೆಗೆ ಭಾರತ ಸರ್ಕಾರದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತಮ್ಮ ಸೇನಾ ಪ್ರಯಾಣವನ್ನು ಆರಂಭಿಸಿದ್ದ ಅವರು, 1985ರ ಡಿಸೆಂಬರ್‌ನಲ್ಲಿ ಗರ್ವಾಲ್ ರೈಫಲ್ಸ್‌ಗೆ ನಿಯೋಜನೆಗೊಂಡಿದ್ದರು. ನಂತರ, ಬ್ರಿಟನ್‌ನ ಬ್ರಾಕ್ನೆಲ್‌ನಲ್ಲಿರುವ ಜಂಟಿ ಸೇವೆಗಳ ಕಮಾಂಡ್ ಸ್ಟಾಫ್ ಕಾಲೇಜಿಗೆ ತೆರಳಿದ್ದರು. ಭಾರತಕ್ಕೆ ಹಿಂದಿರುಗಿದ ನಂತರ, ಮೌಂಟೇನ್ ಬ್ರಿಗೇಡ್‌ನ ಬ್ರಿಗೇಡ್ ಮೇಜರ್ ಆಗಿ ನೇಮಕಗೊಂಡಿದ್ದರು.
ನಂತರ, ದೆಹಲಿಯ ರಾಷ್ಟ್ರೀಯ ರಕ್ಷಣಾ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಅವರು, ಲಂಡನ್‌ನ ಕಿಂಗ್ಸ್ ಕಾಲೇಜಿನಿಂದ ಕಲಾ ಸ್ನಾತಕೋತ್ತರ ಪದವಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ರಕ್ಷಣಾ ಅಧ್ಯಯನದಲ್ಲಿ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ.
35 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಸುಬ್ರಮಣಿ ಅವರು, ಕಝಕಿಸ್ತಾನದ ಅಸ್ತಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ರಕ್ಷಣೆಯ ಕರ್ತವ್ಯ ಸೇರಿದಂತೆ ವಿವಿಧ ಸಂಘರ್ಷಗಳು ಮತ್ತು ಸೇನಾ ಕಾರ್ಯಾಚರಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಸೇನಾ ಪ್ರಧಾನ ಕಚೇರಿಯಲ್ಲಿರುವ ಎಂ.ಎಸ್. ಶಾಖೆಯಲ್ಲಿ ಕರ್ನಲ್ ಶ್ರೇಣಿಯ ಸಹಾಯಕ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಂತರ, ಪೂರ್ವ ಕಮಾಂಡ್‌ನ ಪ್ರಧಾನ ಕಚೇರಿಯಲ್ಲಿ ಕರ್ನಲ್ ಜನರಲ್ ಸ್ಟಾಫ್ (ಕಾರ್ಯಾಚರಣೆ) ಆಗಿ ಸೇವೆ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರೀಯ ರೈಫಲ್ಸ್ ವಲಯದ ಉಪ ಕಮಾಂಡರ್ ಹುದ್ದೆ ಅಲಂಕರಿಸಿದ್ದರು. ಬ್ರಿಗೇಡಿಯರ್ ಆಗಿ ಬಡ್ತಿ ಪಡೆದ ನಂತರ, ಸಾಂಬಾದಲ್ಲಿ 168 ಪದಾತಿ ದಳಕ್ಕೆ ಕಮಾಂಡರ್ ಆಗಿದ್ದರು.
ಸೇನಾ ಪ್ರಧಾನ ಕಚೇರಿಯಲ್ಲಿ ಮಿಲಿಟರಿ ಗುಪ್ತಚರ ಉಪ ಮಹಾನಿರ್ದೇಶಕರಾಗಿಯೂ(ಡಿಡಿಜಿಎಂಐ) ಸೇವೆ ಸಲ್ಲಿಸಿದ ಅವರು, ನಂತರ ಪೂರ್ವ ಕಮಾಂಡ್‌ನಲ್ಲಿ ಬ್ರಿಗೇಡಿಯರ್ ಜನರಲ್ ಸ್ಟಾಫ್ (ಕಾರ್ಯಾಚರಣೆ) ಆಗಿ ಬಡ್ತಿ ಪಡೆದಿದ್ದರು.
2023ರಲ್ಲಿ, ಸುಬ್ರಮಣಿ ಕೇಂದ್ರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಅಧಿಕಾರ ವಹಿಸಿಕೊಂಡರು. ಒಂದು ವರ್ಷದ ನಂತರ, ಸೇನಾ ಪಡೆಗಳ 47ನೇ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸಕ್ರಿಯ ಮಿಲಿಟರಿ ಸೇವೆಯಿಂದ ನಿವೃತ್ತರಾದ ನಂತರ, ಅವರನ್ನು ಇಲ್ಲಿಯವರೆಗೆ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಮಿಲಿಟರಿ ಸಲಹೆಗಾರರಾಗಿ (ಎನ್‌ಎಸ್‌ಸಿಎಸ್) ನೇಮಕ ಮಾಡಲಾಗಿತ್ತು.
ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಸುಬ್ರಮಣಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.

