ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿರುವ ಹೊತ್ತಿಗೆ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್, ತ್ರಿಪುರಾದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶವೂ ಹೊರಬೀಳುತ್ತಿದೆ.
ಇದೀಗ ಬಂದ ವರದಿಯ ಪ್ರಕಾರ ನಾಗಾಲ್ಯಾಂಡ್‌ನ ಕೋರಿಡಾಂಗ್ ಕ್ಷೇತ್ರದಲ್ಲಿ ಬಿಜೆಪಿಯ ಡೋಷರ್ ಐ.ಮಿಚೆನ್ ಅವರು ಗೆಲುವು ಸಾಧಿಸಿದ್ದಾರೆ. ಗುಜರಾತ್‌ನ ಉಮ್ರೇತ್‌ನಲ್ಲಿ ಬಿಜೆಪಿಯ ಹರ್ಷದ್‌ಭಾಯ್ ಗೋವರ್ಧನ್‌ಭಾಯ್ ಪಾರ್ಮರ್ ಗೆಲುವು ಸಾಧಿಸಿದ್ದಾರೆ.
ತ್ರಿಪುರಾದಲ್ಲಿ ಧರ್ಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಾಹರ್ ಚಕ್ರವರ್ತಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಬಾಗಲಕೋಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಗೆಲುವು ದಾಖಲಿಸಿದ್ದಾರೆ.
ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರು ಮೃತಪಟ್ಟಿದ್ದರು. ಇದರಿಂದ ತೆರವಾಗಿರುವ ಬಾರಾಮತಿ ಕ್ಷೇತ್ರದಿಂದ ಅವರ ಪತ್ನಿ ಸುನೇತ್ರಾ ಅವರು ಎನ್‌ಸಿಪಿ ಪಕ್ಷದಿಂದ ಸ್ಪರ್ಧಿಸಿದ್ದಾರೆ.
ಅಜಿತ್ ಪವಾರ್ ಅವರ ನಿಧನದ ನಂತರ ಸುನೇತ್ರಾ ಅವರು ದೇವೇಂದ್ರ ಫಡಣವೀಸ್ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಹೀಗಾಗಿ ಬಾರಾಮತಿಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಸುನೇತ್ರಾ ಅವರಿಗಿತ್ತು.
ಇವರ ವಿರುದ್ಧ ಸ್ಪರ್ಧಿಸದಿರಲು ಶರದ್‌ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಕಣಕ್ಕಿಳಿಯದಿರಲು ನಿರ್ಧರಿಸಿತು. ಕಾಂಗ್ರೆಸ್ ಕೂಡಾ ತನ್ನ ಅಭ್ಯರ್ಥಿಯನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿಯೂ ಹೇಳಿತು. ಹೀಗಿದ್ದರೂ ಎನ್‌ಆರ್‌ಎಸ್‌ಪಿ ಪಕ್ಷದ ಪ್ರೊ. ಆರ್.ವೈ.ಘುಟಕಡೆ, ಎಚ್‌ಜೆಪಿಯ ಸತೀಶ್ ಕೃಷ್ಣ ಕದಂ, 20 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಆರಂಭದಲ್ಲಿ ನಡೆದ ಮತ ಎಣಿಕೆಯಲ್ಲಿ ಚಲಾವಣೆಯಾದ 26,733 ಮತಗಳಷ್ಟೂ ಸುನೇತ್ರಾ ಅವರ ಪಾಲಾಗಿವೆ ಎಂದು ವರದಿಯಾಗಿದೆ.
ಇದೇ ಉಪಚುನಾವಣೆಯಲ್ಲಿ ಗೋವಾದ ಪೊಂಡಾ ಕ್ಷೇತ್ರಕ್ಕೂ ಚುನಾವಣೆ ನಡೆಯಬೇಕಿತ್ತು. ಮತದಾನಕ್ಕೂ ಒಂದು ದಿನ ಮೊದಲು ಬಾಂಬೆ ಹೈಕೋರ್ಟ್‌ನ ಆದೇಶದಂತೆ ಅದು ರದ್ದುಗೊಂಡಿತು.
ಗುಜರಾತ್‌ನ ಉಮ್ರೇತ್ ಕ್ಷೇತ್ರದ ಶಾಸಕರಾಗಿದ್ದ ಗೋವಿರಭಾಯಿ ರೈಜಿಭಾಯಿ ಪಾರ್ಮರ್, ಕರ್ನಾಟದ ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ. ಮೇಟಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಮನೂರು ಶಿವಶಂಕರಪ್ಪ, ರಹುರಿ ಕ್ಷೇತ್ರದ ಶಿವಾಜಿ ಭಾನುದಾಸ್ ಕಾರ್ಡಿಲೆ, ಬಾರಾಮತಿಯ ಅಜಿತ್ ಪವಾರ್, ನಾಗಾಲ್ಯಾಂಡ್‌ನ ಕೊರಿಡಾಂಗ್ ಕ್ಷೇತ್ರದ ಬಿಸ್ವ ಬಂಧು ಸೇನ್ ಅವರ ನಿಧನದಿಂದ ತೆರವಾದ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
ಇದರಲ್ಲಿ ತ್ರಿಪುರದ ಧರ್ಮನಗರ ಕ್ಷೇತ್ರದಲ್ಲಿ ಶೇ 80.04ರಷ್ಟು ಮತದಾನವಾಗಿತ್ತು.
ಗುಜರಾತ್‌ನ ಉಮ್ರೇತ್ - ಶೇ 59.04
ನಾಗಾಲ್ಯಾಂಡ್‌ನ ಕೊರಿಡಾಂಗ್- ಶೇ 82.21
ಕರ್ನಾಟಕದ ಬಾಗಲಕೋಟೆ- ಶೇ 68.62
ಕರ್ನಾಟಕದ ದಾವಣಗೆರೆ ದಕ್ಷಿಣ - ಶೇ 68.43
ಮಹಾರಾಷ್ಟ್ರದ ರಹೂರಿ - ಶೇ 55.89
ಮಹಾರಾಷ್ಟ್ರದ ಬಾರಾಮತಿ - ಶೇ 58.89
ದೇಶದ ಏಳು ಕ್ಷೇತ್ರಗಳ ಉಪಚನಾವಣೆಯಲ್ಲಿ ಕರ್ನಾಟದ ದಾವಣಗೆರೆ ದಕ್ಷಿಣ, ಬಾಗಲಕೋಟೆ, ಗುಜರಾತ್‌ನ ಉಮ್ರೇತ್, ಮಹಾರಾಷ್ಟ್ರದ ರಹುರಿ ಮತ್ತು ಬಾರಾಮತಿ, ನಾಗಾಲ್ಯಾಂಡ್‌ನ ಕೊರಿಡಾಂಗ್ (ಎಸ್‌ಟಿ) ಹಾಗೂ ತ್ರಿಪುರದ ಧರ್ಮನಗರ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ.
ಇತ್ತೀಚಿನ ಮಾಹಿತಿ ಪ್ರಕಾರ ರಹೂತಿ ಮತ್ತು ಉಮ್ರೇತ್‌ನಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ದಾವಣಗೆರೆ ದಕ್ಷಿಣದಲ್ಲಿ ಕರ್ನಾಟಕ, ಬಾರಾಮತಿಯಲ್ಲಿ ಎನ್‌ಸಿಪಿ ಮುನ್ನಡೆ ಕಾಯ್ದುಕೊಂಡಿದೆ.

