ನವದೆಹಲಿ: ತೆಲಂಗಾಣದಲ್ಲಿ ಕಳಪೆ ಕೆಲಸದ ದಾಖಲೆಯ ಹೊರತಾಗಿಯೂ ಉತ್ತರ ಪತ್ರಿಕೆಗಳ 'ಆನ್ ಸ್ಕ್ರೀನ್ ಮಾರ್ಕಿಂಗ್'ಗಾಗಿ(ಒಎಸ್‌ಎಂ) ಅದೇ ಕಂಪನಿಯನ್ನು ನೇಮಿಸಿಕೊಂಡಿದ್ದ ಸಿಬಿಎಸ್‌ಇ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಪ್ರಶ್ನಿಸಿದ್ದಾರೆ.
ಸಿಬಿಎಸ್‌ಇ ಫಲಿತಾಂಶದ ಅವ್ಯವಸ್ಥೆಗೆ ಕಾರಣವಾದ ಅಪರಾಧಿಗಳನ್ನು ಪತ್ತೆ ಮಾಡಲು ನ್ಯಾಯಾಂಗ ತನಿಖೆ ಮತ್ತು ವಿಶೇಷ ತನಿಖಾ ತಂಡದ(ಎಸ್‌ಐಟಿ) ತನಿಖೆಗೆ ಅವರು ಒತ್ತಾಯಿಸಿದ್ದಾರೆ.
ಸಿಬಿಎಸ್‌ಇ ಪರೀಕ್ಷಾ ಫಲಿತಾಂಶದಲ್ಲಿ ಬೃಹತ್ ಅಕ್ರಮ ನಡೆದಿದ್ದು, ದೇಶದಾದ್ಯಂತ ಲಕ್ಷಾಂತರ ಮಕ್ಕಳು ಮತ್ತು ಅವರ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಆದರೆ, ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯಿಂದ ಯಾವುದೇ ಉತ್ತರವಿಲ್ಲ, ಯಾವುದೇ ಹೊಣೆಗಾರಿಕೆ ಪ್ರದರ್ಶಿಸಿಲ್ಲ ಮತ್ತು ಇದು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
'ಎಕ್ಸ್' ನಲ್ಲಿ ಈ ವಿಷಯದ ಕುರಿತು ವಿಡಿಯೊ ಪೋಸ್ಟ್ ಮಾಡಿರುವ ಅವರು, ಝೆನ್ ಜಿ ಸ್ನೇಹಿತರ ಕಠಿಣ ಪರಿಶ್ರಮ ಮತ್ತು ಭವಿಷ್ಯವನ್ನು ಯಾರೂ ಕದಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಪರೀಕ್ಷೆಗಳ ಕುರಿತಂತೆ ನಂಬಲಸಾಧ್ಯವಾದ ವಿಷಯಗಳು ಹೊರಬರುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಕ್ಕೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಉತ್ತಮವಾಗಿ ಪರೀಕ್ಷೆ ಬರೆದಿದ್ದರೂ ತಮ್ಮ ಉತ್ತರ ಪತ್ರಿಕೆಗಳನ್ನು ಸರಿಯಾಗಿ ಸ್ಕ್ಯಾನ್ ಮಾಡದೇ ಇರುವುರಿಂದ ಮೌಲ್ಯಮಾಪನ ದೋಷದಿಂದ ಕಡಿಮೆ ಅಂಕ ಬಂದಿರುವ ಬಗ್ಗೆ ಹಲವು ವಿದ್ಯಾರ್ಥಿಗಳು ಆರೋಪಿಸಿದ ಬೆನ್ನಲ್ಲೇ ರಾಹುಲ್ ಹೇಳಿಕೆ ಬಂದಿದೆ.
ಪರೀಕ್ಷೆಯ ಒಎಸ್‌ಎಂ ಹೊಣೆ ಹೊತ್ತಿರುವ Coempt ಕಂಪನಿಯು 2019ರಲ್ಲಿ ತೆಲಂಗಾಣದಲ್ಲಿ Globarena ಹೆಸರಿನಲ್ಲಿ ಕೆಲಸ ಮಾಡಿದೆ. ಅದರ ಮೇಲೆ ಗಂಭೀರ ಆರೋಪಗಳು ಬಂದಿದ್ದವು ಎಂದು ರಾಹುಲ್ ವಿಡಿಯೊದಲ್ಲಿ ಹೇಳಿದ್ದಾರೆ.
'ಹೆಸರು ಮಾತ್ರ ಬದಲಾಗಿದೆ. ಆದರೆ, ಸಂಸ್ಥೆಯ ಉದ್ದೇಶ ಅದೇ ಆಗಿರುತ್ತದೆ. ಕಂಪನಿಯ ಇತಿಹಾಸ ಎಲ್ಲರಿಗೂ ತಿಳಿದಿದೆ. ಆದರೂ ಆ ಕಂಪನಿಗೆ ಗುತ್ತಿಗೆ ನೀಡಲಾಗಿದೆ. 1.85 ಮಿಲಿಯನ್ ಮಕ್ಕಳ ಭವಿಷ್ಯವನ್ನು ಅಂತಹ ಕಂಪನಿ ಕೈಗೆ ಕೊಡಲಾಗಿದೆ. ಇದು ಅಚಾನಕ್ ಆಗಿ ಆಗಿರುವುದಲ್ಲ. ಉದ್ದೇಶಪೂರ್ವಕ ಪಿತೂರಿ'ಎಂದು ಆರೋಪಿಸಿದ್ದಾರೆ.
ಕಂಪನಿಯ ಹಿನ್ನೆಲೆ ತಿಳಿಯಲು 30 ಸೆಕೆಂಡು ಸಾಕು. ಸಿಬಿಎಸ್‌ಇ ಮತ್ತು ಸರ್ಕಾರ ನಡೆಸುವವರಿಗೆ ಈ ಬಗ್ಗೆ ತಿಳಿದೇ ಇರುತ್ತದೆ ಎಂದಿದ್ದಾರೆ.
ತಮ್ಮ ವಿಡಿಯೊವನ್ನು ಹಂಚಿಕೊಂಡು ಸಿಬಿಎಸ್‌ಇ, ಕೇಂದ್ರ ಸರ್ಕಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವಂತೆ ರಾಹುಲ್ ಕರೆ ನೀಡಿದ್ದಾರೆ. ಒಎಸ್‌ಎಂ ಗುತ್ತಿಗೆ ನೀಡಲಾಗಿರುವ Coempt ಕಂಪನಿ ಬಗ್ಗೆ ವಿಚಾರಿಸುವಂತೆ ಮನವಿ ಮಾಡಿದ್ದಾರೆ.
Coempt ಆಡಳಿತ ಮಂಡಳಿ ಮತ್ತು ಮೋದಿ ಸರ್ಕಾರದ ನಡುವೆ ಇರುವ ನಂಟೇನು? ಅಪರಾಧದ ಹಿಂದಿರುವ ತಪ್ಪಿತಸ್ಥರ ಪತ್ತೆಗೆ ನ್ಯಾಯಾಂಗ ತನಿಖೆ ಮತ್ತು ಎಸ್‌ಐಟಿ ಅಗತ್ಯವಿದೆ. ನಾವು ವಿದ್ಯಾರ್ಥಿಗಳ ಜೊತೆ ನಿಂತಿದ್ದೇವೆ. ನಮ್ಮಿಂದ ಸಾಧ್ಯವಿರುವ ಯಾವುದೇ ಮಾರ್ಗದಲ್ಲಿ ವಿದ್ಯಾರ್ಥಿಗಳಿಗೆ ನೆರವು ನೀಡಲು ಮತ್ತು ರಕ್ಷಿಸಲು ಸಿದ್ಧವಿದ್ದೇವೆ ಎಂದಿದ್ದಾರೆ.

