12ನೇ ತರಗತಿ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ತಮ್ಮ ಬ್ಲಾಗ್‌ನಲ್ಲಿ OSM ಒಪ್ಪಂದಕ್ಕೆ ಸಂಬಂಧಿಸಿದ ಟೆಂಡರ್ ದಾಖಲೆಗಳನ್ನು ಪರಿಶೀಲಿಸಿ ವಿಶ್ಲೇಷಣೆ ಪ್ರಕಟಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯ ವಿವಿಧ ಹಂತಗಳಲ್ಲಿ ಷರತ್ತುಗಳು ಮತ್ತು ಅರ್ಹತಾ ಮಾನದಂಡಗಳಲ್ಲಿ ಮಾಡಲಾದ ಬದಲಾವಣೆಗಳು ಹೈದರಾಬಾದ್ ಮೂಲದ ಕೋಎಂಪ್ಟ್ ಎಡ್ಯೂಟೆಕ್ ಸಂಸ್ಥೆಗೆ ಅನುಕೂಲವಾಗುವಂತೆ ನಡೆದಿರಬಹುದು ಎಂದು ಅವರು ಆರೋಪಿಸಿದ್ದಾರೆ. ಅಂತಿಮವಾಗಿ ಇದೇ ಸಂಸ್ಥೆಗೆ ಒಪ್ಪಂದ ನೀಡಲಾಗಿದೆ ಎಂದೂ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.
ಟೆಂಡರ್ ದಾಖಲೆಗಳ ವಿವಿಧ ಆವೃತ್ತಿಗಳನ್ನು ಹೋಲಿಕೆ ಮಾಡಿರುವ ಸಾರ್ಥಕ್, ಒಪ್ಪಂದ ನೀಡುವ ಮುನ್ನ ಅರ್ಹತೆ ಹಾಗೂ ಮೌಲ್ಯಮಾಪನ ಮಾನದಂಡಗಳಲ್ಲಿ ಹಲವು ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ತಮ್ಮ ಆರೋಪಗಳಿಗೆ ಪೂರಕವಾಗಿ ಖರೀದಿ ದಾಖಲೆಗಳು, ಟೆಂಡರ್ ಷರತ್ತುಗಳು ಮತ್ತು ಹಣಕಾಸು ಬಹಿರಂಗಪಡಿಸುವಿಕೆಗಳನ್ನು ಉಲ್ಲೇಖಿಸಿದ್ದಾರೆ.
OSM ವ್ಯವಸ್ಥೆಯ ಅನುಷ್ಠಾನದ ಬಗ್ಗೆ ವಿದ್ಯಾರ್ಥಿಗಳಿಂದ ವ್ಯಕ್ತವಾದ ಕಳವಳಗಳ ಹಿನ್ನೆಲೆಯಲ್ಲಿ ದಾಖಲೆಗಳನ್ನು ಅಧ್ಯಯನ ಮಾಡಲು ಆರಂಭಿಸಿದ್ದಾಗಿ ಸಾರ್ಥಕ್ ತಿಳಿಸಿದ್ದಾರೆ. ಹಲವು ಸಾವಿರ ಪದಗಳನ್ನು ಒಳಗೊಂಡಿರುವ ಬ್ಲಾಗ್‌ನಲ್ಲಿ ಹೆಚ್ಚಿನ ಪಾರದರ್ಶಕತೆಗೆ ಒತ್ತಾಯಿಸಿರುವ ಅವರು, ಟೆಂಡರ್ ಷರತ್ತುಗಳಲ್ಲಿ ಮಾಡಲಾದ ಬದಲಾವಣೆಗಳ ಹಿಂದಿನ ಕಾರಣವನ್ನು ಸ್ಪಷ್ಟಪಡಿಸುವಂತೆ CBSEಯನ್ನು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಯ ಬ್ಲಾಗ್ ಅನ್ನು ಹಲವು ವಿರೋಧ ಪಕ್ಷದ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಪ್ರತಿಕ್ರಿಯಿಸಿ, ವಿದ್ಯಾರ್ಥಿಯು ಮಂಡಳಿಯ ಸ್ವಂತ ದಾಖಲೆಗಳನ್ನು ಆಧರಿಸಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಹೇಳಿದ್ದಾರೆ.
'17 ವರ್ಷದ ಸಾರ್ಥಕ್ ಸಿದ್ಧಾಂತ್, CBSEಯ ಸ್ವಂತ ದಾಖಲೆಗಳನ್ನು ಬಳಸಿಕೊಂಡು ಕೋಎಂಪ್ಟ್‌ಗೆ ಲಾಭವಾಗುವಂತೆ ಆಯ್ಕೆ ಪ್ರಕ್ರಿಯೆಯನ್ನು ಹೇಗೆ ಬದಲಾಯಿಸಲಾಯಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಬ್ಲಾಗ್‌ನಲ್ಲಿರುವ ವಿವರಗಳು, ಟಿಸಿಎಸ್‌ಗೆ ನಷ್ಟವಾಗುವ ರೀತಿಯಲ್ಲಿ ಕೋಎಂಪ್ಟ್‌ಗೆ ಅನುಕೂಲ ಕಲ್ಪಿಸಲು ಟೆಂಡರ್ ದಾಖಲೆಗಳನ್ನು ಹೇಗೆ ತಿದ್ದುಪಡಿ ಮಾಡಲಾಗಿದೆ ಎಂಬುದನ್ನು ತೋರಿಸುತ್ತವೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ನಿರಾಕರಣೆಗಳ ಟೊಳ್ಳುತನವೂ ಇದರಿಂದ ಬಹಿರಂಗವಾಗಿದೆ' ಎಂದು ರಾಹುಲ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
'ಈ ಪ್ರಕರಣದ ಸಂಪೂರ್ಣ ಸತ್ಯ ಹೊರಬರಲು ಸ್ವತಂತ್ರ ನ್ಯಾಯಾಂಗ ತನಿಖೆ ಅಗತ್ಯ. ಭಾರತದ GEN Z ಯುವಕರು ಧೈರ್ಯಶಾಲಿಗಳು ಮತ್ತು ನಿರ್ಭೀತರು ಎಂಬುದನ್ನು ಸಾರ್ಥಕ್ ಅವರ ಕೆಲಸ ಸಾಬೀತುಪಡಿಸಿದೆ' ಎಂದೂ ಅವರು ಹೇಳಿದ್ದಾರೆ.
12ನೇ ತರಗತಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಪರಿಚಯಿಸಲಾದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಕುರಿತು ನಡೆಯುತ್ತಿರುವ ಚರ್ಚೆಗಳ ನಡುವೆಯೇ ಈ ವಿವಾದ ಮುನ್ನೆಲೆಗೆ ಬಂದಿದೆ. ಈ ಹಿಂದೆ CBSE, OSM ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದು, ಮೌಲ್ಯಮಾಪನದ ನಿಖರತೆ ಅಥವಾ ನ್ಯಾಯಸಮ್ಮತತೆಗೆ ಧಕ್ಕೆ ಉಂಟಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿತ್ತು.

