ನವದೆಹಲಿ: ಭಾರತವು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊದಲ 'ಗ್ಲೈಡ್ ಅಸ್ತ್ರ'ದ ಪರೀಕ್ಷಾರ್ಥ ಪ್ರಯೋಗ ಒಡಿಶಾದ ಕರಾವಳಿ ತೀರದಲ್ಲಿ ಯಶಸ್ವಿಯಾಗಿ ನೆರವೇರಿತು.
ಇದು ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭಾರತದ ಮೊದಲ ಅಸ್ತ್ರವಾಗಿದೆ' ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ಒಡಿಶಾದ ಕರಾವಳಿ ತೀರದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಭಾರತೀಯ ವಾಯುಪಡೆ(ಐಎಎಫ್) ಜಂಟಿಯಾಗಿ ಮೊದಲ ಗ್ಲೈಡ್ ಅಸ್ತ್ರದ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು' ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಹೈದರಾಬಾದ್‌ನ ಸಂಶೋಧನಾ ಕೇಂದ್ರ ಇಮಾರತ್ (ಆರ್‌ಸಿಐ) ಮತ್ತು ಡಿಆರ್‌ಡಿಒ ಪ್ರಯೋಗಾಲಯಗಳು ಈ ಅಸ್ತ್ರ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಏನಿದು ತಾರಾ (TARA) ವ್ಯವಸ್ಥೆ?
ಮಾರ್ಗದರ್ಶನವಿಲ್ಲದ ಸಿಡಿತಲೆಗಳನ್ನು ನಿಖರ ಮಾರ್ಗದರ್ಶಿತ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸುವುದಕ್ಕಾಗಿ ಟ್ಯಾಕ್ಟಿಕಲ್ ಅಡ್ವಾನ್ಸ್ಡ್ ರೇಂಜ್ ಆಗ್ಮೆಂಟೇಶನ್ (TARA) ಗ್ಲೈಡ್ ಅಸ್ತ್ರವನ್ನು ಅಭಿವೃದ್ಧಿಪಡಿಸಲಾಗಿದೆ.
ಮೊದಲ ಸ್ವದೇಶಿ ಹಾರಾಡುವ ಶಸ್ತ್ರಾಸ್ತ್ರ ವ್ಯವ್ಯವಸ್ಥೆಯಾಗಿದ್ದು, ಕಡಿಮೆ ವೆಚ್ಚದಲ್ಲಿ ನೆಲದ ಮೇಲಿನ ಶತ್ರು ನೆಲೆಗಳನ್ನು ನಿಖರವಾಗಿ ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ
ಇದರ ಪ್ರಮುಖ ವಿಶೇಷತೆ ಎಂದರೆ ನೆಲದ ಮೇಲಿನ ಗುರಿಗಳನ್ನು ದೂರದಿಂದಲೇ ಅತ್ಯಂತ ನಿಖರವಾಗಿ ಹೊಡೆಯುವ ಸಾಮರ್ಥ್ಯ ಹೊಂದಿರುವುದು. ಈ ತಾರಾ ವ್ಯವಸ್ಥೆಯು ಗುರಿ ತಪ್ಪಿರುವ ಸಿಡಿತಲೆಗಳನ್ನು ಅಸ್ತ್ರಗಳನ್ನಾಗಿ ಪರಿವರ್ತಿಸುವ ಮೂಲಕ ಭಾರತೀಯ ಸೇನೆಯ ದಾಳಿ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿದೆ.
ಈಗಾಗಲೇ ಉತ್ಪಾದನಾ ಚಟುವಟಿಕೆಗಳನ್ನೂ ಪ್ರಾರಂಭಿಸಲಾಗಿದೆ. ಇದರಿಂದ 'ಮೇಕ್ ಇನ್ ಇಂಡಿಯಾ' ಮತ್ತು ಆತ್ಮನಿರ್ಭರ ಉಪಕ್ರಮಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯ ವೃದ್ಧಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ನಮ್ಮ ಡಿಆರ್‌ಡಿಒ, ಭಾರತೀಯ ವಾಯುಪಡೆ ಮತ್ತು ಪಾಲುದಾರಿಕೆ ಸಂಸ್ಥೆಗಳ ವಿಜ್ಞಾನಿಗಳು ಮತ್ತು ತಂತ್ರಜ್ಞರಿಗೆ ಅಭಿನಂದನೆಗಳು.

