ಲಂಡನ್/ನವದೆಹಲಿ: ಐಷಾರಾಮಿ ನೌಕೆ 'ಎಂವಿ ಹೊಂಡಿಯಸ್'ನಲ್ಲಿರುವ ಐವರು ಸಿಬ್ಬಂದಿಯಲ್ಲಿ ಹಂಟಾವೈರಸ್ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಇಬ್ಬರು ಭಾರತೀಯರಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.
ಶಂಕಿತ ಎಂಟು ಪ್ರಕರಣಗಳಲ್ಲಿ ಐದು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಅರ್ಜೆಂಟೀನಾದಿಂದ ಏ.1ರಂದು ಪ್ರವಾಸ ಆರಂಭಿಸಿರುವ ವಿಹಾರ ನೌಕೆಯಲ್ಲಿ 28 ದೇಶಗಳ 150 ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದು, ಮೇ 10ರಂದು ಸ್ಪೇನ್ಗೆ ತಲುಪುವ ನಿರೀಕ್ಷೆಯಿದೆ.
ನೌಕೆಯಲ್ಲಿರುವ 12 ದೇಶಗಳ 29 ಪ್ರಯಾಣಿಕರು ಈಗಾಗಲೇ ತಮ್ಮ ಪ್ರವಾಸ ಮೊಟಕುಗೊಳಿಸಿ ಹಡಗಿನಿಂದ ಇಳಿದಿದ್ದಾರೆ. ವಿಹಾರ ನೌಕೆಯಲ್ಲಿ ಪ್ರಯಾಣಿಸುತ್ತಿರುವ ಎಲ್ಲರಿಗೂ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ, ಅಗತ್ಯ ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.
ಭಾರತಕ್ಕೆ ಅಪಾಯವಿಲ್ಲ...
ಭಾರತೀಯರಿಬ್ಬರಲ್ಲಿ ಹಂಟಾವೈರಸ್ ಸೋಂಕು ದೃಢಪಟ್ಟಿದ್ದರೂ, ದೇಶದಲ್ಲಿ ಯಾವುದೇ ರೀತಿಯ ಆತಂಕ ಇಲ್ಲ ಎಂದು ಐಸಿಎಂಆರ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ನಿರ್ದೇಶಕ ಡಾ. ನವೀನ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
'ಸಮುದಾಯಕ್ಕೆ ವೈರಸ್ ಹರಡಿದ ಯಾವುದೇ ಪುರಾವೆಗಳು ಲಭ್ಯವಿಲ್ಲ' ಎಂದಿದ್ದಾರೆ.

