ಭಾರತದ ಅನೇಕ ಮಕ್ಕಳು ವೈದ್ಯರಾಗಬೇಕು ಎಂಬ ಕನಸು ಕಂಡಿರುತ್ತಾರೆ. ಆದರೆ, ಅದನ್ನು ನಿಜ ಮಾಡಿಕೊಳ್ಳಬೇಕು ಎಂದರೆ, ನಿರಂತರ ಪರಿಶ್ರಮ ಅಗತ್ಯಗತ್ಯ. ವಿಶೇಷವಾಗಿ, ರಾಷ್ಟ್ರೀಯ ಅರ್ಹತಾ ಪರೀಕ್ಷೆ (NEET)ಯಂತಹ ಕಠಿಣ ಪರೀಕ್ಷೆಯನ್ನು ಪಾಸ್ ಮಾಡಬೇಕು. ಆಗ ಮಾತ್ರ ವೈದ್ಯರಾಗಲು ಅರ್ಹತೆ ಸಿಗುತ್ತದೆ.
ವೈದ್ಯರಾಗಲು ಅನೇಕ ಮಕ್ಕಳು, ನೀಟ್‌ನಂತಹ ಕಠಿಣ ಪರೀಕ್ಷೆ ಎದುರಿಸಲು ರಾತ್ರಿ-ಹಗಲು ಎನ್ನದೆ, ತಮ್ಮ ಎಲ್ಲಾ ಶ್ರಮವನ್ನು ಹಾಕುತ್ತಾರೆ. ಸ್ನೇಹಿತರ ಜೊತೆ ಸಮಯ ಕಳೆಯುವುದನ್ನು ಬಿಟ್ಟು ಪರೀಕ್ಷೆ ಎದುರಿಸುತ್ತಾರೆ. ಆದರೆ, ಅನೇಕ ಸಂದರ್ಭಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಪ್ರಕರಣಗಳು ಸಂಭವಿಸಿ ಕಷ್ಟಪಟ್ಟು ಪರೀಕ್ಷೆ ಬರೆದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಪ್ರತೀ ವರ್ಷ ನೀಟ್ ಪರೀಕ್ಷೆಯನ್ನು ಬರೋಬ್ಬರಿ 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಬರೆಯುತ್ತಾರೆ. ಅದು, ಕೇವಲ ಒಂದು ದಿನದ ಅಥವಾ ಆ ವಿದ್ಯಾರ್ಥಿಯೊಬ್ಬನ ಕನಸು ಮಾತ್ರ ಆಗಿರುವುದಿಲ್ಲ. ಬದಲಾಗಿ, ಒಂದು ಇಡೀ ಕುಟುಂಬದ ಭರವಸೆ, ಆಸೆ, ಕನಸಾಗಿರುತ್ತದೆ. ಅಂತ ಕಠಿಣ ಪರೀಕ್ಷೆಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದಾಗ, ವಿದ್ಯಾರ್ಥಿಗಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಸಹಜ.
ಇಂಡಿಯಾ ಟುಡೇ ವರದಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ನೀಟ್‌ಗೆ ಪರೀಕ್ಷೆಗೆ ಸಂಬಂಧಿಸಿದಂತೆ ಕನಿಷ್ಠ 93 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. 2025ರಲ್ಲಿ ಆ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದ್ದು, ಬರೋಬ್ಬರಿ 32 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
2026ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರಿಂದ, ಮರುಪರೀಕ್ಷೆ ನಿಗದಿ ಮಾಡಲಾಗಿದೆ. ಆದರೂ, ಈಗಾಗಲೇ ಕನಿಷ್ಠ 14 ವಿದ್ಯಾರ್ಥಿಗಳು ಸಾವಿಗೀಡಾಗಿರುವುದಾಗಿ ಪ್ರಕರಣಗಳು ದಾಖಲಾಗಿವೆ ಎಂದು ವರದಿ ತಿಳಿಸಿದೆ.
ವರ್ಷದಿಂದ ವರ್ಷಕ್ಕೆ NEET ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ವರದಿ ತಿಳಿಸಿದೆ. 2021ರಲ್ಲಿ 4 ಪ್ರಕರಣಗಳು ದಾಖಲಾಗಿದ್ದವು. 2022 ರಲ್ಲಿ ಇದರ ಸಂಖ್ಯೆ 9ಕ್ಕೆ ಏರಿಕೆಯಾಗಿತ್ತು. 2023ರಲ್ಲಿ 14 ಮತ್ತು 2024ರಲ್ಲಿ 19 ವಿದ್ಯಾರ್ಥಿಗಳು ಮೃತರಾಗಿರುವುದಾಗಿ ವರದಿ ತಿಳಿಸಿದೆ.
2025 ರಲ್ಲಿ ಬರೋಬ್ಬರಿ 32 ವಿದ್ಯಾರ್ಥಿಗಳು ಸಾವಿಗೀಡಾಗಿರುವ ಪ್ರಕರಣಗಳು ದಾಖಲಾಗಿರುವುದಾಗಿ ವರದಿ ತಿಳಿಸಿದೆ. 2026 ರಲ್ಲಿ ಈ ಸಂಖ್ಯೆ ಆತಂಕಕಾರಿಯಾಗಿದ್ದು, ಮೇ 12 ರಂದು ಪರೀಕ್ಷೆ ರದ್ದತಿ ಘೋಷಿಸಿದಾಗಿನಿಂದ ಇದುವರೆಗೆ ದಾಖಲಾದ 5 ಪ್ರಕರಣಗಳು ಸೇರಿದಂತೆ ಇಲ್ಲಿಯವರೆಗೆ ಕನಿಷ್ಠ 14 ಪ್ರಕರಣಗಳು ವರದಿಯಾಗಿವೆ.

ಇಂಡಿಯಾ ಟುಡೇ ವರದಿ ಆಧಾರದ ಅನ್ವಯ 2021 ರಿಂದ 2026ರ ಅವಧಿಯಲ್ಲಿ ನೀಟ್ ಸಂಬಂಧಿತ ಸಾವುಗಳ ಸಂಖ್ಯೆ
ನೀಟ್-ಸಂಬಂಧಿತ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ವರದಿಗಳನ್ನು ಆಧರಿಸಿ ಇಂಡಿಯನ್ ಜರ್ನಲ್ ಆಫ್ ಸೈಕಲಾಜಿಕಲ್ ಮೆಡಿಸಿನ್‌ನಲ್ಲಿ 2021ರಲ್ಲಿ ವರದಿಯೊಂದನ್ನು ಪ್ರಕಟಿಸಿತ್ತು. ಅದರ ಅನ್ವಯ 2018ರ ಜನವರಿಯಿಂದ 2020ರ ಸೆಪ್ಟೆಂಬರ್ ನಡುವೆ 32 ಸಾವಿನ ಪ್ರಕರಣಗಳು ದಾಖಲಾಗಿದ್ದವು ಎಂದು ವರದಿಯಾಗಿತ್ತು. ಸದ್ಯ, ಈಗ ಇಂಡಿಯಾ ಟುಡೇ ವರದಿ ಮಾಡಿರುವ 2021ರಿಂದ 20226ರ ನಡುವಿನ ಸಂಖ್ಯೆಗಳು ಭಯ ಹುಟ್ಟಿಸುವಂತಿದೆ.

