ನೀಟ್ ಪರೀಕ್ಷೆಯ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆಗಳ ಸೋರಿಕೆಗೆ ಸಂಬಂಧಿಸಿದಂತೆ ಸಿಬಿಐನ ಆರ್ಥಿಕ ಅಪರಾಧ ಘಟಕವು ದಿಲ್ಲಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಸೋಮವಾರ ಲಾತೂರ್ ನ 'RCC Classesʼ ನ ನಿರ್ದೇಶಕ ಪ್ರೊ. ಶಿವರಾಜ್ ಮೋಟೆಗಾಂವ್ಕರ್ ರನ್ನು ಸಿಬಿಐ ವಶಕ್ಕೆ ಪಡೆದಿದೆ.
ನಾಗ್ಪುರದಲ್ಲಿನ ಕೆಲವು ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಲಭಿಸಿದ ಹಿನ್ನೆಲೆಯಲ್ಲಿ, ಸಿಬಿಐ ತಂಡಗಳು ನಾಗ್ಪುರದಲ್ಲಿ ಶೋಧ ಕಾರ್ಯಾಚರಣೆ ನಡೆಸಿದವು.
ಸಿಬಿಐ ಸಿಬ್ಬಂದಿಗಳು ನಾಗ್ಪುರದಲ್ಲಿನ ಇಬ್ಬರು ವಿದ್ಯಾರ್ಥಿಗಳು ಹಾಗೂ ಚಂದ್ರಪುರ್ ಜಿಲ್ಲೆಯ ಬ್ರಹ್ಮಪುರಿಯ ಓರ್ವ ವಿದ್ಯಾರ್ಥಿಯ ನಿವಾಸಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ದಾಖಲೆಗಳು ಹಾಗೂ ನೋಟ್ ಬುಕ್ ಗಳನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಯಿತು. ವಶಪಡಿಸಿಕೊಳ್ಳಲಾಗಿರುವ ನೋಟ್ ಬುಕ್ ಗಳೊಂದಿಗೆ ಸೋರಿಕೆಯಾಗಿರುವ ಪ್ರಶ್ನೆ ಪತ್ರಿಕೆಗಳಿಗೇನಾದರೂ ಹೋಲಿಕೆ ಇದೆಯೇ ಎಂದು ಸಿಬಿಐ ಪರಿಶೀಲಿಸುತ್ತಿದೆ.
ಈ ವಂಚನೆಯಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿದ್ದಾರೆ ಎಂದು ಸಿಬಿಐ ಶಂಕೆ ವ್ಯಕ್ತಪಡಿಸಿದೆ. ವಶಕ್ಕೆ ಪಡೆಯಲಾಗಿರುವ ಮೂವರು ವಿದ್ಯಾರ್ಥಿಗಳೇನಾದರೂ ಪ್ರಶ್ನೆ ಪತ್ರಿಕೆಗಳನ್ನು ಖರೀದಿಸಿದ್ದಾರೆಯೇ ಅಥವಾ ಆ ಪ್ರಶ್ನೆ ಪತ್ರಿಕೆಗಳನ್ನು ಇತರರಿಗೆ ವರ್ಗಾಯಿಸಿದ್ದಾರೆಯೇ ಎಂಬ ಕುರಿತು ಸಿಬಿಐ ತನಿಖೆ ನಡೆಸುತ್ತಿದೆ.
ನಾಗ್ಪುರ, ಚಂದ್ರಪುರ ಸೇರಿದಂತೆ ದೇಶಾದ್ಯಂತ ಸಿಬಿಐ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಆದರೆ, ಈ ಪ್ರಶ್ನೆ ಪತ್ರಿಕೆ ಹಗರಣದ ಕೇಂದ್ರ ಸ್ಥಾನ ನಾಗ್ಪುರ ಅಲ್ಲ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

