HEALTH TIPS

Tamil Nadu | ಬಹುಮತ ಸಾಬೀತುಪಡಿಸಲು ವಿಫಲ, ಇಂದು ʼವಿಜಯೋʼತ್ಸವವಿಲ್ಲ: ವರದಿ

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿರುವ ನಡುವೆಯೇ, ನಟ-ರಾಜಕಾರಣಿ ವಿಜಯ್ ಅವರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ಇಂದು ಪ್ರಮಾಣವಚನ ಸ್ವೀಕರಿಸುವ ಅವಕಾಶ ಸಿಗದಿರುವ ಸಾಧ್ಯತೆ ಹೆಚ್ಚಾಗಿದೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅವರನ್ನು ಸರ್ಕಾರ ರಚಿಸಲು ರಾಜ್ಯಪಾಲ ಆರ್‌.ವಿ. ಅರ್ಲೇಕರ್ ಆಹ್ವಾನಿಸಿಲ್ಲ ಎಂದು ಲೋಕಭವನದ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

234 ಸದಸ್ಯರ ವಿಧಾನಸಭೆಯಲ್ಲಿ ಬಹುಮತಕ್ಕೆ 118 ಶಾಸಕರ ಬೆಂಬಲ ಅಗತ್ಯವಿದೆ. ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕಳೆದ ತಿಂಗಳ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅಚ್ಚರಿ ಫಲಿತಾಂಶ ದಾಖಲಿಸಿತ್ತು. ಆದರೆ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾಬಲವನ್ನು ಇನ್ನೂ ಹೊಂದಿಸಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಶುಕ್ರವಾರ ಸಂಜೆ ವಿಜಯ್ ಅವರು ರಾಜ್ಯಪಾಲ ಅರ್ಲೇಕರ್ ಅವರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ತಮ್ಮ ಬಳಿ 118 ಶಾಸಕರ ಬೆಂಬಲವಿದೆ ಎಂದು ಅವರು ಹೇಳಿಕೊಂಡಿದ್ದರು. ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ನಡೆಯಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿದ್ದರೂ, ರಾಜಭವನದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ರಾಜಭವನ ಮೂಲಗಳ ಪ್ರಕಾರ, ಬಹುಮತ ಸಾಬೀತುಪಡಿಸಲು ವಿಜಯ್ ಅವರು ಎರಡು ವಾರಗಳ ಕಾಲಾವಕಾಶ ಕೋರಿದ್ದರು. ಆದರೆ ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದಾರೆ. 'ಸಂಖ್ಯಾಬಲ ಇದ್ದರೆ ತಕ್ಷಣವೇ ಬೆಂಬಲ ಪತ್ರಗಳನ್ನು ನೀಡಬಹುದು. ಹೆಚ್ಚುವರಿ ಸಮಯ ಏಕೆ ಬೇಕು?' ಎಂದು ಅವರು ಪ್ರಶ್ನಿಸಿರುವುದಾಗಿ ಮೂಲಗಳು ಹೇಳಿವೆ.

ವಿಜಯ್ ಅವರೊಂದಿಗೆ ಯಾರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬುದರ ಕುರಿತೂ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದು ತಿಳಿದುಬಂದಿದೆ.

ಟಿವಿಕೆ ತನ್ನ ಮೊದಲ ಚುನಾವಣೆಯಲ್ಲೇ 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಡಿಎಂಕೆ ಮತ್ತು ಎಐಎಡಿಎಂಕೆ ಎಂಬ ದ್ರಾವಿಡ ರಾಜಕೀಯದ ದೈತ್ಯ ಪಕ್ಷಗಳ 62 ವರ್ಷಗಳ ಪ್ರಭಾವಕ್ಕೆ ಈ ಫಲಿತಾಂಶ ಸವಾಲು ಹಾಕಿತ್ತು. ಆದರೆ ಸ್ಪಷ್ಟ ಬಹುಮತದ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಆಹ್ವಾನ ನೀಡುವುದಿಲ್ಲ ಎಂದು ರಾಜ್ಯಪಾಲ ಅರ್ಲೇಕರ್ ಆರಂಭದಿಂದಲೇ ಕಠಿಣ ನಿಲುವು ತಾಳಿದ್ದರು. ಬುಧವಾರ ಮತ್ತು ಗುರುವಾರ ನಡೆದ ಎರಡು ಸುತ್ತಿನ ಸಭೆಗಳಲ್ಲೂ ಅವರು ತಮ್ಮ ನಿಲುವು ಬದಲಿಸಿಲ್ಲ.

'113 ಶಾಸಕರ ಬೆಂಬಲದೊಂದಿಗೆ ಸರ್ಕಾರ ನಡೆಸಲು ಸಾಧ್ಯವಿಲ್ಲ' ಎಂದು ರಾಜ್ಯಪಾಲರು ವಿಜಯ್ ಅವರಿಗೆ ತಿಳಿಸಿದ್ದಾಗಿ ಮೂಲಗಳು ಹೇಳಿವೆ. ಆಯ್ಕೆಯಾದ ಶಾಸಕರಿಂದ ಬೆಂಬಲ ಪತ್ರಗಳನ್ನು ಒದಗಿಸುವಂತೆ ಕೂಡ ಒತ್ತಾಯಿಸಲಾಗಿದೆ.

►ಬೆಂಬಲಕ್ಕಾಗಿ ರಾಜಕೀಯ ಕಸರತ್ತು

ಟಿವಿಕೆಗೆ ಬಹುಮತ ತಲುಪಲು ಕನಿಷ್ಠ 10 ಶಾಸಕರ ಬೆಂಬಲ ಅಗತ್ಯವಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಮಿತ್ರಪಕ್ಷ ಡಿಎಂಕೆಯಿಂದ ದೂರ ಸರಿದು ಐದು ಶಾಸಕರ ಬೆಂಬಲ ನೀಡಲು ಸಮ್ಮತಿಸಿತು. ಆದರೆ ಬಿಜೆಪಿ ಅಥವಾ 'ಕೋಮುವಾದಿ ಪಕ್ಷ'ಗಳೊಂದಿಗೆ ಟಿವಿಕೆ ಮೈತ್ರಿ ಮಾಡಿಕೊಳ್ಳಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಂತರ ಟಿವಿಕೆ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಸಿಪಿಐ(ಎಂ) ಹಾಗೂ ಸಿಪಿಐ ಜೊತೆ ಮಾತುಕತೆ ಆರಂಭಿಸಿತು. ಎರಡು ಸುತ್ತಿನ ಸಭೆಗಳ ಬಳಿಕ ಈ ಮೂರು ಪಕ್ಷಗಳೂ ವಿಜಯ್ ಅವರನ್ನು ಬೆಂಬಲಿಸಲು ಒಪ್ಪಿಕೊಂಡಿವೆ ಎಂದು ಮೂಲಗಳು ಹೇಳಿವೆ.

ಈ ಮೂರು ಪಕ್ಷಗಳೂ ಇದುವರೆಗೆ ಡಿಎಂಕೆ ಮೈತ್ರಿಕೂಟದ ಭಾಗವಾಗಿದ್ದವು. ಡಿಎಂಕೆಯೊಂದಿಗೇ ಮುಂದುವರಿಯಬೇಕೋ ಅಥವಾ ಎಐಎಡಿಎಂಕೆ ಜೊತೆಗಿನ ಹೊಸ ರಾಜಕೀಯ ಸಮೀಕರಣವನ್ನು ಸ್ವೀಕರಿಸಬೇಕೋ ಎಂಬ ಚರ್ಚೆಗಳು ನಡೆದಿದ್ದವು ಎಂದು ತಿಳಿದುಬಂದಿದೆ.

ವಿಸಿಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹಾಗೂ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನ ಯಾವ ಶಾಸಕರು ಟಿವಿಕೆಗೆ ಬೆಂಬಲ ನೀಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಇಬ್ಬರು ಶಾಸಕರಲ್ಲಿ ಒಬ್ಬರು ಮತ್ತು ಟಿಟಿವಿ ದಿನಕರನ್ ನೇತೃತ್ವದ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನ ಏಕೈಕ ಶಾಸಕ ಟಿವಿಕೆಗೆ ಬೆಂಬಲ ನೀಡಬಹುದು ಎಂಬ ಮಾತುಗಳು ಕೇಳಿ ಬಂದಿದೆ.

ಈ ಮಧ್ಯೆ ಟಿವಿಕೆಗೆ ಬಹುಮತಕ್ಕಿಂತ ಒಂದು ಸಂಖ್ಯೆ ಕಡಿಮೆ ಇದೆ ಎಂಬ ಮಾಹಿತಿಯೂ ಹೊರಬಂದಿತ್ತು. ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಲು ವಿಜಯ್ ಸಿದ್ಧರಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತಷ್ಟು ವೇಗ ಪಡೆದುಕೊಂಡವು. ಸಿಪಿಐ ಮತ್ತು ಸಿಪಿಐ(ಎಂ) ಟಿವಿಕೆಗೆ ಬಾಹ್ಯ ಬೆಂಬಲ ನೀಡಲು ಸಮ್ಮತಿಸಿವೆ. ಆದರೆ ಸರ್ಕಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಕಾಂಗ್ರೆಸ್ ತನ್ನ ಬೆಂಬಲಕ್ಕೆ ಎರಡು ಸಚಿವ ಸ್ಥಾನಗಳನ್ನು ನಿರೀಕ್ಷಿಸುತ್ತಿದೆ ಎಂದು ತಿಳಿದುಬಂದಿದೆ.

►ಡಿಎಂಕೆ-ಎಐಎಡಿಎಂಕೆ ಮೈತ್ರಿ ಊಹಾಪೋಹ

ರಾಜಕೀಯ ಬೆಳವಣಿಗೆಯ ನಡುವೆ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಸಾಧ್ಯತೆಗಳ ಕುರಿತೂ ಊಹಾಪೋಹಗಳು ಜೋರಾಗಿದ್ದವು. ಸಾಮಾಜಿಕ ನ್ಯಾಯದ ದ್ರಾವಿಡ ತತ್ವವನ್ನು ಹಂಚಿಕೊಂಡಿದ್ದರೂ, ಎರಡೂ ಪಕ್ಷಗಳು ರಾಜಕೀಯವಾಗಿ ಕಡು ವಿರೋಧಿಗಳಾಗಿವೆ. ರಾಜಕೀಯ ವೀಕ್ಷಕರ ಪ್ರಕಾರ, ವಿಜಯ್ ಅವರ ʼಬೆಳವಣಿಗೆʼ ಉಭಯ ಪಕ್ಷಗಳಲ್ಲೂ ಆತಂಕ ಹೆಚ್ಚಾಗಿದೆ. ಡಿಎಂಕೆಗೆ ಎಂಜಿಆರ್ ಕಾಲದ ರಾಜಕೀಯ ನೆನಪುಗಳು ಕಾಡುತ್ತಿದ್ದರೆ, ಎಐಎಡಿಎಂಕೆಗೆ ಕಳೆದ ದಶಕದ ಚುನಾವಣಾ ಸೋಲುಗಳು ನೆನಪಾಗುತ್ತಿವೆ ಎಂದು ವಿಶ್ಲೇಷಿಸಲಾಗಿದೆ. ಆದರೂ, ಡಿಎಂಕೆ-ಎಐಎಡಿಎಂಕೆ ಮೈತ್ರಿ ಊಹಾಪೋಹದ ಹಂತವನ್ನು ಮೀರಿ ಸಾಗಿಲ್ಲ. ಎರಡೂ ಪಕ್ಷಗಳ ಸಿದ್ಧಾಂತಕ್ಕೆ ಅಂಟಿಕೊಂಡಿರುವ ನಾಯಕರು ಅಂತಹ ಮೈತ್ರಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ಟಿವಿಕೆ ಮತ್ತು ಎಐಎಡಿಎಂಕೆ ನಡುವೆ ಸಹ ಒಪ್ಪಂದ ಸಾಧ್ಯತೆಗಳ ಕುರಿತ ಚರ್ಚೆಗಳು ಕೆಲಕಾಲ ನಡೆದಿದ್ದವು ಎಂದು ಹೇಳಲಾಗಿದೆ.

►ಬಿಜೆಪಿ ಸ್ಪಷ್ಟನೆ

ಈ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಯಾವುದೇ ಪಾತ್ರವಿಲ್ಲ ಎಂದು ಪಕ್ಷದ ರಾಜ್ಯ ಘಟಕದ ವಕ್ತಾರ ನಾರಾಯಣ್ ತಿರುಪತಿ ಹೇಳಿದ್ದಾರೆ. 'ಇದು ವಿಭಜಿತ ಜನಾದೇಶ. ಟಿವಿಕೆಗೆ ಸ್ಪಷ್ಟ ಬಹುಮತ ಇಲ್ಲ. ವಿಜಯ್ ಬಹುಮತ ಸಾಬೀತುಪಡಿಸಿದರೆ ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಗೊಂದಲ ಇಲ್ಲ' ಎಂದು ಅವರು ಹೇಳಿದ್ದಾರೆ. ವಿಜಯ್ ಅವರನ್ನು ತಡೆಯಲು ಬಿಜೆಪಿ ರಾಜ್ಯಪಾಲರ ಮೇಲೆ ಒತ್ತಡ ಹೇರಿದೆ ಎಂಬ ಆರೋಪವನ್ನೂ ಅವರು ತಳ್ಳಿಹಾಕಿದ್ದಾರೆ.

'ಇದು ಪ್ರಜಾಪ್ರಭುತ್ವ ದೇಶ. ಚುನಾವಣೆಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತವೆ. ಯಾರ ಮೇಲೂ ಒತ್ತಡ ಹೇರಲು ಸಾಧ್ಯವಿಲ್ಲ. ಇಂತಹ ಆರೋಪಗಳು ರಾಜಕೀಯ ವಾಕ್ಚಾತುರ್ಯ ಮಾತ್ರ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries