ನವದೆಹಲಿ: 'ಎಲ್ ನಿನೊ ಪರಿಣಾಮದಿಂದ ಶೇಕಡ 43ರಷ್ಟು ಮಳೆ ಕೊರತೆ ಆಗಲಿದ್ದು, ದೇಶದ 111 ಜಿಲ್ಲೆಗಳಲ್ಲಿ ಮುಂಗಾರು ಹಂಗಾಮಿಗೆ ಬೆಳೆಹಾನಿ ಪ್ರಮಾಣ ತೀವ್ರವಾಗಿರಲಿದೆ' ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
'ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂಧ್ರ ಪ್ರದೇಶ, ಒಡಿಶಾ ರಾಜ್ಯಗಳ ಒಟ್ಟು 315 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬೀಳಲಿದೆ ಎಂದು ಸರ್ಕಾರ ಗುರುತಿಸಿದೆ' ಎಂದು ಮಂಗಳವಾರ ನಡೆದ ಮುಂಗಾರು ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ತಿಳಿಸಿದರು.
'ಶೇ 25ಕ್ಕಿಂತ ಕಡಿಮೆ ನೀರಾವರಿ ಪ್ರದೇಶಗಳನ್ನು ಹೊಂದಿರುವ ಮಹಾರಾಷ್ಟ್ರದ 20 ಜಿಲ್ಲೆಗಳು ಸೇರಿ, ಒಟ್ಟು 111 ಜಿಲ್ಲೆಗಳಲ್ಲಿ ಪರಿಣಾಮ ತೀವ್ರವಾಗಿರಲಿದೆ. ಶೇ 25ರಿಂದ ಶೇ 50ರಷ್ಟು ನೀರಾವರಿ ಪ್ರದೇಶವನ್ನು ಹೊಂದಿರುವ 76 ಜಿಲ್ಲೆಗಳು ಮಧ್ಯಮ ಪರಿಣಾಮ ಎದುರಿಸಲಿವೆ. ಸಾಕಷ್ಟು ಅಣೆಕಟ್ಟು ಮತ್ತು ನೀರಾವರಿ ಮೂಲಸೌಕರ್ಯಗಳನ್ನು ಹೊಂದಿರುವ 128 ಜಿಲ್ಲೆಗಳು ಕನಿಷ್ಠ ಪರಿಣಾಮ ಎದುರಿಸಲಿವೆ' ಎಂದು ಸಚಿವಾಲಯವು ವರ್ಗೀಕರಿಸಿದೆ.
'ಜಲಾಶಯಗಳ ನೀರಿನಮಟ್ಟ ಸದ್ಯಕ್ಕೆ ಕಳೆದ ವರ್ಷಕ್ಕಿಂತಲೂ ಹೆಚ್ಚಿದೆ, ಆದರೆ ಕುಸಿಯುತ್ತಿದೆ. ನೀರನ್ನು ವಿವೇಚನೆಯಿಂದ ಬಳಸಬೇಕು ಮತ್ತು ವಿಬಿ ಜಿರಾಮ್ ಜಿ ಅಡಿ ಕೊಳ, ಕಾಲುವೆ, ಕೃಷಿ ಹೊಂಡಗಳು, ಚೆಕ್ ಡ್ಯಾಮ್‌ಗಳನ್ನು ಸ್ವಚ್ಛಗೊಳಿಸುವಂತೆ ರಾಜ್ಯ ಸರ್ಕಾರಗಳನ್ನು ಕೋರಲಾಗಿದೆ' ಎಂದು ಸಚಿವರು ತಿಳಿಸಿದರು.
'ಗುರುತಿಸಲಾದ ರಾಜ್ಯಗಳಲ್ಲಿ ಬೆಳೆ ವಿಮೆ ಯೋಜನೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ಸ್ ಅಡಿ ವ್ಯಾಪಕವಾಗಿ ನೋಂದಣಿ ಮಾಡಿಸಬೇಕು. ಸಂದೇಶಗಳು, ವಾಟ್ಸ್‌ಆಯಪ್, ದೂರವಾಣಿ ಕರೆ ಮತ್ತಿತರ ಮಾಧ್ಯಮಗಳ ಸಹಾಯದಿಂದ ಕೃಷಿಕರಿಗೆ ಸಕಾಲದಲ್ಲಿ ಸಲಹೆಗಳನ್ನು ಬಿತ್ತರಿಸಬೇಕು ಎಂದು 731 ಕೃಷಿ ವಿಜ್ಞಾನ ಕೇಂದ್ರಗಳಿಗೆ ಹೇಳಲಾಗಿದೆ' ಎಂದರು.
'ಮುನ್ಸೂಚನೆಗಳು ಸಾಮಾನ್ಯ ಪರಿಸ್ಥಿತಿಯನ್ನು ಆಧರಿಸಿವೆ. ಆದರೆ, ಕೃಷಿ ಉತ್ಪಾದನೆ ಕುಸಿಯದಂತೆ ಖಚಿತಪಡಿಸಲು ಕ್ರಮ ಕೈಗೊಳ್ಳುತ್ತೇವೆ' ಎಂದು ಅವರು ಭರವಸೆ ನೀಡಿದರು.
ಕಳೆದ ವರ್ಷ ಜೂನ್ 22ರ ವೇಳೆಗೆ 1.17 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಈ ಬಾರಿ ಅದಕ್ಕಿಂತ ಸ್ವಲ್ಪ ಹೆಚ್ಚು, ಅಂದರೆ 1.19 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಸೋಯಾಬೀನ್ ಹೊರತುಪಡಿಸಿ ಉಳಿದ ಬೆಳೆಗಳ ಬಿತ್ತನೆ ಕಳೆದ ಮುಂಗಾರು ಋತುವಿಗಿಂತ ಹೆಚ್ಚಿದೆ.
ಶಿವರಾಜ್ ಸಿಂಗ್ ಚೌಹಾಣ್ ಕೇಂದ್ರ ಕೃಷಿ ಸಚಿವಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರಿಗೆ ಸಲಹೆ ನೀಡಬೇಕು. ಕೃಷಿ ಜಮೀನುಗಳು ಖಾಲಿ ಉಳಿಯದಂತೆ ನೋಡಿಕೊಳ್ಳಬೇಕು. ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಲಭ್ಯತೆ ಸಾಕಷ್ಟಿದೆ ಮಳೆ ಪ್ರಮಾಣಕ್ಕೆ ಸೂಕ್ತವಾಗುವ ಪರ್ಯಾಯ ಬೆಳೆ ಶಿಫಾರಸು ಸೇರಿದಂತೆ ಆಯಾ ರಾಜ್ಯಗಳಿಗೆ ಅನುಗುಣವಾಗುವ ತುರ್ತು ಯೋಜನೆಗಳನ್ನು ಸಚಿವಾಲಯ ರೂಪಿಸಿದೆ. ಏಕ ಬೆಳೆ ಪದ್ಧತಿಯನ್ನು ಅವಲಂಬಿಸುವ ಬದಲು ಕಡಿಮೆ ನೀರು- ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಪ್ರತಿಕೂಲ ಹವಾಮಾನವನ್ನು ತಾಳಿಕೊಳ್ಳುವ ತಳಿಯ ದ್ವಿದಳ ಧಾನ್ಯಗಳು ಎಣ್ಣೆ ಬೀಜಗಳು ಒರಟು ಧಾನ್ಯಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗಿದೆ. ಕ್ಷಣಕ್ಷಣದ ನಿಗಾ ಮತ್ತು ಸಲಹೆಗಾಗಿ ಎಲ್ ನಿನೊ ನಿಗಾ ಘಟಕ ಮತ್ತು ಬೆಳೆ ಹವಾಮಾನ ವಿಚಕ್ಷಣಾ ಗುಂಪುಗಳನ್ನು ರಚಿಸಲಾಗಿದೆ.

