ನವದೆಹಲಿ: ಭಾರತ ಮತ್ತು ಅಮೆರಿಕದ ನಡುವೆ ನಡೆದ ಎರಡು ದಿನಗಳ ಸಚಿವರ ಮಟ್ಟದ ಸಭೆಯಲ್ಲಿ ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಪ್ರಮುಖ ವಿಷಯಗಳಾದ ಮಾರುಕಟ್ಟೆ ವಿಸ್ತರಣೆ, ಡಿಜಿಟಲ್ ವ್ಯಾಪಾರ, ಸುಂಕ ಸಂಬಂಧಿತ ಅಡೆತಡೆಗಳು ಸೇರಿದಂತೆ ಸಹಕಾರದ ಕುರಿತು ಚರ್ಚೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಮತ್ತು ಅಮೆರಿಕದ ವ್ಯಾಪಾರ ಪ್ರತಿನಿಧಿ ಜೆಮಿಸನ್ ಗ್ರೀರ್ ನಡುವೆ ಸಭೆ ನಡೆದಿದ್ದು, ವ್ಯಾಪಾರ ಒಪ್ಪಂದ ಕುರಿತಾದ ಪ್ರಮುಖ ಅಂಶಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಫೆಬ್ರುವರಿಯಲ್ಲಿ ಮಾಡಿಕೊಳ್ಳಲಾದ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಗೋಯಲ್ ಮತ್ತು ಗ್ರೀರ್ ಚರ್ಚೆ ನಡೆಸಿದ್ದಾರೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.
ಉಭಯ ದೇಶಗಳ ಉದ್ಯಮಗಳು, ರೈತರು, ಕಾರ್ಮಿಕರು, ಗ್ರಾಹಕರಿಗೆ ಪ್ರಯೋಜನಗಳನ್ನು ನೀಡುವ ಮತ್ತು ವಾಣಿಜ್ಯಿಕವಾಗಿ ಅರ್ಥಪೂರ್ಣವಾದ ಸಮತೋಲಿತ ಒಪ್ಪಂದಕ್ಕೆ ಉಭಯ ದೇಶಗಳ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ ಎಂದು ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
ಇತ್ತೀಚಿನ ತಿಂಗಳುಗಳಲ್ಲಿ ಉಭಯ ದೇಶಗಳ ಸಮಾಲೋಚನಾ ತಂಡಗಳು ಸಾಧಿಸಿರುವ ಗಣನೀಯ ಪ್ರಗತಿಯನ್ನು ಇಬ್ಬರೂ ನಾಯಕರು ಶ್ಲಾಘಿಸಿದ್ದಾರೆ.
'ಪ್ರಸ್ತುತ ನಡೆಯುತ್ತಿರುವ ಭಾರತ-ಅಮೆರಿಕ ನಡುವೆ ನಡೆಯುತ್ತಿರುವ ದ್ವಿಪಕ್ಷೀಯ ಮಾತುಕತೆಗಳು ಆರ್ಥಿಕ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜತೆಗೆ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸಲಿವೆ' ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

