HEALTH TIPS

ಜೂ.11ರಂದು ಫಿಫಾ ವಿಶ್ವಕಪ್ ಆರಂಭ

ನ್ಯೂಯಾರ್ಕ್: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫಿಫಾ ವಿಶ್ವಕಪ್ ಈ ಬಾರಿ ಜೂನ್ 11ರಂದು ಆರಂಭವಾಗಲಿದೆ. ಜಗತ್ತಿನ ಶ್ರೀಮಂತ ಕ್ರೀಡಾಕೂಟಗಳಲ್ಲಿ ಒಂದಾಗಿರುವ ಫಿಫಾ ವಿಶ್ವಕಪ್ ಅನ್ನು ಈ ಬಾರಿ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳು ಜಂಟಿಯಾಗಿ ಆಯೋಜಿಸುತ್ತಿವೆ.

ಫಿಫಾ ವಿಶ್ವಕಪ್ ಇತಿಹಾಸ: ಫಿಫಾ(ಫೆಡರೇಶನ್ ಇಂಟರ್ನ್ಯಾಶನಲ್ ಡಿ ಫುಟ್ಬಾಲ್ ಅಸೋಸಿಯೇಶನ್) 1904ರಲ್ಲಿ ಸ್ಥಾಪನೆಯಾಯಿತು. ಆದರೆ ಸ್ವತಂತ್ರ ವಿಶ್ವಕಪ್ ಪಂದ್ಯಾವಳಿಯ ಕನಸು 1920ರಲ್ಲಿ ನನಸಾಯಿತು. ಫಿಫಾದ ಅಧ್ಯಕ್ಷ ಜೂಲ್ಸ್ ರಿಮೆಟ್ ಅವರು ಈ ಟೂರ್ನಿಯ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾಗಾಗಿ ಅವರ ಗೌರವಾರ್ಥವಾಗಿ ಈ ಟ್ರೋಫಿಗೆ ಆರಂಭಿಕ ವರ್ಷಗಳಲ್ಲಿ 'ಜೂಲ್ಸ್ ರಿಮೆಟ್ ಟ್ರೋಫಿ'ಎಂದು ಹೆಸರಿಡಲಾಗಿತ್ತು.

ಮೊತ್ತ ಮೊದಲ ಫುಟ್ಬಾಲ್ ವಿಶ್ವಕಪ್ ಟೂರ್ನಿಯು 1930ರಲ್ಲಿ ಉರುಗ್ವೆಯಲ್ಲಿ ನಡೆಯಿತು. ಉರುಗ್ವೆ ದೇಶವು ತನ್ನ ಸ್ವಾತಂತ್ರ್ಯದ ದಶಮಾನೋತ್ಸವ ಆಚರಿಸುತ್ತಿದ್ದರಿಂದ ಈ ಕ್ರೀಡಾಕೂಟದ ಆತಿಥ್ಯ ವಹಿಸಿತ್ತು. ಆರಂಭದಲ್ಲಿ 13 ತಂಡಗಳು ಭಾಗವಹಿಸಿದ್ದವು. ಉರುಗ್ವೆ ತಂಡವು ಅರ್ಜೆಂಟೀನ ತಂಡವನ್ನು 4-2ರಿಂದ ಸೋಲಿಸಿ ಚಾಂಪಿಯನ್ ಆಯಿತು.

1934 ಹಾಗೂ 1938ರಲ್ಲಿ ಸತತ ಎರಡು ಆವೃತ್ತಿಗಳಲ್ಲಿ ಇಟಲಿ ತಂಡ ಜಯ ಗಳಿಸಿತು. ಎರಡನೇ ವಿಶ್ವಯುದ್ದದ ಹಿನ್ನೆಲೆಯಲ್ಲಿ 1942 ಹಾಗೂ 1946ರ ಪಂದ್ಯಾವಳಿಗಳು ರದ್ದಾದವು.

1950ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ಟೂರ್ನಿಯಲ್ಲಿ ಉರುಗ್ವೆ ತಂಡ ಮತ್ತೊಮ್ಮೆ ಚಾಂಪಿಯನ್ ಆಯಿತು. 1954ರಿಂದ ಜರ್ಮನಿ, ಬ್ರೆಝಿಲ್, ಇಂಗ್ಲೆಂಡ್, ಅರ್ಜೆಂಟೀನ ಮುಂತಾದ ತಂಡಗಳು ಪ್ರತಿಷ್ಠಿತ ಟೂರ್ನಿಯಲ್ಲಿ ಗೆಲುವು ಪಡೆದಿವೆ.

ಚಾಂಪಿಯನ್ ತಂಡಗಳು: 1930ರಿಂದ 2022ರ ತನಕ ಫಿಫಾ ವಿಶ್ವಕಪ್ 22 ಆವೃತ್ತಿಗಳನ್ನು ಪೂರ್ಣಗೊಳಿಸಿದೆ. ಈ ಅವಧಿಯಲ್ಲಿ ಎಂಟು ಬೇರೆ ಬೇರೆ ದೇಶಗಳು ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿವೆ.

ಫಿಫಾ ವಿಶ್ವಕಪ್ ಅನ್ನು ಐದು ಬಾರಿ ಗೆಲ್ಲುವ ಮೂಲಕ ಬ್ರೆಝಿಲ್ ತಂಡವು ಪಂದ್ಯಾವಳಿಯ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿದೆ. ಬ್ರೆಝಿಲ್ ತಂಡವು 1958, 1962, 1970, 1994 ಹಾಗೂ 2002ರಲ್ಲಿ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದೆ.

ಜರ್ಮನಿ ತಂಡವು ನಾಲ್ಕು ಬಾರಿ ವಿಶ್ವಕಪ್ ಟ್ರೋಫಿಯನ್ನು ಜಯಿಸಿದೆ. ಅದು 1954, 1974 , 1990 ಹಾಗೂ 2014ರಲ್ಲಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.

ಇಟಲಿ ತಂಡ ಕೂಡ ನಾಲ್ಕು ಬಾರಿ ಪ್ರತಿಷ್ಠಿತ ಫಿಫಾ ವಿಶ್ವಕಪ್ ಗೆದ್ದು ಸಾಧನೆ ಮಾಡಿದೆ. ಅದು 1934, 1938, 1982 ಹಾಗೂ 2006ರಲ್ಲಿ ಈ ಸಾಧನೆ ಮಾಡಿದೆ.

ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವು ಮೂರು ಬಾರಿ ಫಿಫಾ ವಿಶ್ವಕಪ್ ಜಯಿಸಿದೆ. 1978, 1986 ಹಾಗೂ 2022ರಲ್ಲಿ ಈ ಸಾಧನೆ ಮಾಡಿದೆ.

ಫ್ರಾನ್ಸ್ ಹಾಗೂ ಉರುಗ್ವೆ ದೇಶಗಳು ತಲಾ ಎರಡು ಬಾರಿ ಟ್ರೋಫಿ ಗೆದ್ದರೆ, ಇಂಗ್ಲೆಂಡ್ ಹಾಗೂ ಸ್ಪೇನ್ ದೇಶಗಳು ಒಂದೊಂದು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿವೆ.

ಹಾಲಿ ಚಾಂಪಿಯನ್ ಅರ್ಜೆಂಟೀನ: ಖತರ್‌ನಲ್ಲಿ ನಡೆದ 2022ರ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಲಿಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನ ತಂಡವು ಚಾಂಪಿಯನ್ ಆಗಿದೆ. ಅರ್ಜೆಂಟೀನ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು ಮಣಿಸುವ ಮೂಲಕ ಮೂರನೇ ಬಾರಿ ಪ್ರತಿಷ್ಠಿತ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು.

ಈ ಬಾರಿ 48 ತಂಡಗಳು: 1930ರ ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ 13 ತಂಡಗಳು ಭಾಗವಹಿಸಿದ್ದವು. ಬಳಿಕ 1978ರ ತನಕ 16 ತಂಡಗಳು ಭಾಗಿಯಾಗಿದ್ದವು. 1982ರಲ್ಲಿ 24 ತಂಡಗಳು, 1998ರಿಂದ 32 ತಂಡಗಳು, ಈ ಬಾರಿ(2026)ಅತ್ಯಧಿಕ ಒಟ್ಟು 48 ತಂಡಗಳು ಭಾಗವಹಿಸುತ್ತಿವೆ.

ಅಮೆರಿಕ, ಕೆನಡಾದಲ್ಲಿ ನೀರಿನ ಬಾಟಲಿ ನಿಷೇಧ ಹಿಂಪಡೆದ ಫಿಫಾ

ವಿಶ್ವಕಪ್ ಕ್ರೀಡಾಂಗಣಗಳಲ್ಲಿ ಮರು ಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ನಿಷೇಧಿಸಿದ್ದಕ್ಕಾಗಿ ವ್ಯಾಪಕ ಟೀಕೆಗಳನ್ನು ಎದುರಿಸಿದ ಕೆಲವೇ ದಿನಗಳಲ್ಲಿ ಫುಟ್ಬಾಲ್ ಆಡಳಿತ ಮಂಡಳಿ ಫಿಫಾ ತನ್ನ ನಿಲುವನ್ನು ಬದಲಿಸಿದೆ.

2026ರ ಫಿಫಾ ವಿಶ್ವಕಪ್‌ಗೆ ಮುಂಚಿತವಾಗಿ ಇದು ಫುಟ್ಬಾಲ್ ಅಭಿಮಾನಿಗಳಿಗೆ ಸಂಬಂಧಿಸಿದ ಅತ್ಯಂತ ವಿವಾದಾತ್ಮಕ ವಿಚಾರಗಳಲ್ಲಿ ಒಂದೆನಿಸಿಕೊಂಡಿತು. ರಾಜಕಾರಣಿಗಳು, ಅಭಿಮಾನಿಗಳ ಗುಂಪುಗಳು, ಆರೋಗ್ಯ ತಜ್ಞರು ಹಾಗೂ ಸ್ಥಳೀಯ ಅಧಿಕಾರಿಗಳಿಂದ ಒತ್ತಡ ಹೆಚ್ಚಾದ ಬಳಿಕ ಅಮೆರಿಕ ಹಾಗೂ ಕೆನಡಾದಲ್ಲಿ ಪಂದ್ಯಗಳನ್ನು ವೀಕ್ಷಿಸುವ ಪ್ರೇಕ್ಷಕರು ಸೀಲ್ ಮಾಡಿದ ನೀರಿನ ಬಾಟಲಿಗಳನ್ನು ತಮ್ಮ ಸ್ಥಳಗಳಿಗೆ ಕೊಂಡೊಯ್ಯಲು ಅನುಮತಿಸಲಾಗುವುದು ಎಂದು ಫಿಫಾ ಇದೀಗ ದೃಢಪಡಿಸಿದೆ.

ಆದರೆ, ಮೆಕ್ಸಿಕೊದಲ್ಲಿ ನಡೆಯುವ ವಿಶ್ವಕಪ್ ಪಂದ್ಯಗಳಿಗೂ ಇದೇ ನೀತಿ ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಕಳೆದ ವಾರ ಫಿಫಾದ ಕ್ರೀಡಾಂಗಣದ ನಿಯಮಗಳಲ್ಲಿ ಮಾಡಿದ ಸತತ ಬದಲಾವಣೆಗಳಿಂದ ಈ ಗೊಂದಲ ಉಂಟಾಗಿದೆ.

ಫುಟ್ಬಾಲ್ ಅಭಿಮಾನಿಗಳು ವಿಶ್ವಕಪ್ ಕ್ರೀಡಾಂಗಣಗಳಿಗೆ ಒಂದು ಲೀಟರ್ ಸಾಮರ್ಥ್ಯದ ಪಾರದರ್ಶಕ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ತರಲು ಫಿಫಾದ ನೀತಿಯು ಅವಕಾಶ ಮಾಡಿಕೊಟ್ಟಿತು. ನಂತರ ಅಭಿಮಾನಿಗಳು ಆ ಬಾಟಲಿಗಳನ್ನು ಸ್ಟೇಡಿಯಂನೊಳಗಿನ ನೀರಿನ ಕಾರಂಜಿಗಳಲ್ಲಿ ನೀರು ತುಂಬಿಸಲು ಅವಕಾಶ ನೀಡಲಾಗಿತ್ತು.

ಈ ವಾರದ ಆರಂಭದಲ್ಲಿ ಫಿಫಾ ತನ್ನ ಕ್ರೀಡಾಂಗಣದ ನೀತಿ ಸಂಹಿತೆಯನ್ನು ನವೀಕರಿಸಿದಾಗ, ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಅನುಮತಿಸುವ ಮಾರ್ಗಸೂಚಿಯನ್ನು ತೆಗೆದುಹಾಕಿತು.

ವಿಶ್ವಕಪ್ ಕ್ರೀಡಾಂಗಣಗಳಲ್ಲಿ ಕಂಪೆನಿಗಳಿಂದ ತಯಾರಿಸಲ್ಪಟ್ಟ ಬಿಸಾಡಬಹುದಾದ ನೀರಿನ ಬಾಟಲಿಗಳನ್ನು ಫಿಫಾ ಅನುಮತಿಸಿತು.

ಈ ಬದಲಾವಣೆಯಿಂದಾಗಿ ಕ್ರೀಡಾಭಿಮಾನಿಗಳು ತಮ್ಮದೇ ಮರು ಬಳಕೆ ಮಾಡಬಹುದಾದ ಬಾಟಲಿಗಳನ್ನು ತರುವ ಬದಲು ರಿಯಾಯಿತಿ ಸ್ಟ್ಯಾಂಡ್‌ಗಳಿಂದ ಪಾನೀಯಗಳನ್ನು ಖರೀದಿಸಬೇಕಾಗಿದೆ.

ಫಿಫಾದ ಈ ನಿಯಮಕ್ಕೆ ಭಾರೀ ಟೀಕೆ ವ್ಯಕ್ತವಾಯಿತು. ಈ ಬಾರಿ ವಿಶ್ವಕಪ್ ಅನ್ನು ಉತ್ತರ ಅಮೆರಿಕಾದಲ್ಲಿ ಬೇಸಿಗೆ ಸಮಯದಲ್ಲಿ ಆಡಲಾಗುತ್ತದೆ. ಹಲವಾರು ಪಂದ್ಯಗಳು ವಿಪರೀತ ಸೆಖೆಯ ನಡುವೆ ನಡೆಯುವ ನಿರೀಕ್ಷೆ ಇದೆ.

ಪಂದ್ಯಾವಳಿ ಆರಂಭವಾಗುವ ಮೊದಲೇ ತೀವ್ರತರವಾದ ಬಿಸಿಲಿನ ತಾಪದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಸದ್ಯ ಅಮೆರಿಕ ಹಾಗೂ ಕೆನಡಾದ ಅಭಿಮಾನಿಗಳು ಮುಚ್ಚಿದ ನೀರಿನ ಬಾಟಲಿಗಳನ್ನು ಕ್ರೀಡಾಂಗಣಗಳಿಗೆ ತರಬಹುದು. ಮೆಕ್ಸಿಕೊದ ಬೆಂಬಲಿಗರಿಗೂ ಅದೇ ರೀತಿಯ ನಿಯಮ ಅನ್ವಯವಾಗುತ್ತದೆಯೇ? ಎಂದು ಪಂದ್ಯಾವಳಿ ಆರಂಭವಾಗುವ ಮೊದಲು ಸ್ಪಷ್ಟವಾಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries