ಸ್ಥಳೀಯ ಸಮಯ ಸಂಜೆ ಸುಮಾರು 5.30ಕ್ಕೆ ಗುಂಡಿನ ದಾಳಿ ನಡೆದಿರುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳೆಲ್ಲರೂ ಬದುಕುಳಿಯುವ ನಿರೀಕ್ಷೆಯಿದೆ ಎಂದು ಟೊಲೆಡೊ ನಗರದ ಮೇಯರ್ ವೇಡ್ ಕಪ್ಜುಕಿವಿಚ್ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಂಕಿತರನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಯ ಕಾರಣ ಮತ್ತು ಹಿನ್ನೆಲೆ ಕುರಿತು ತನಿಖೆ ನಡೆಯುತ್ತಿದೆ.
ಉತ್ಸವದಲ್ಲಿ ಭಾಗವಹಿಸಿದ್ದ ಕೆವಿನ್ ಬೆರ್ರಿ ಎಂಬ ಪ್ರತ್ಯಕ್ಷದರ್ಶಿ, ಲೈವ್ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಏಕಾಏಕಿ ಹಲವಾರು ಸುತ್ತಿನ ಗುಂಡಿನ ಸದ್ದು ಕೇಳಿಸಿತು ಎಂದು ತಿಳಿಸಿದ್ದಾರೆ.
'ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ಭಯಭೀತರಾಗಿ ಓಡತೊಡಗಿದರು. ಬಳಿಕ ಗಾಯಾಳುಗಳಿಗೆ ನೆರವು ನೀಡಲಾಯಿತು' ಎಂದು ಅವರು ಹೇಳಿದ್ದಾರೆ.
ಟೊಲೆಡೊ ನಗರದ ಐತಿಹಾಸಿಕ ಪ್ರದೇಶದಲ್ಲಿ ನಡೆಯುವ ಓಲ್ಡ್ ವೆಸ್ಟ್ ಎಂಡ್ ಉತ್ಸವವು ಎರಡು ದಿನಗಳ ಸಮುದಾಯ ಕಾರ್ಯಕ್ರಮವಾಗಿದ್ದು, ಸಂಗೀತ, ಆಹಾರ ಮಳಿಗೆಗಳು, ಶಾಪಿಂಗ್ ಮತ್ತು ಐತಿಹಾಸಿಕ ಮನೆಗಳ ವೀಕ್ಷಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಒಳಗೊಂಡಿದೆ.
ಒಹಾಯೊ ರಾಜ್ಯಪಾಲ ಮೈಕ್ ಡಿವೈನ್, ಕುಟುಂಬಗಳು ಭಾಗವಹಿಸುವ ಸಾರ್ವಜನಿಕ ಉತ್ಸವಗಳು ಸುರಕ್ಷಿತವಾಗಿರಬೇಕು ಎಂದು ಹೇಳಿದ್ದು, ತಪ್ಪಿತಸ್ಥರನ್ನು ಬಂಧಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

